ತಿರುವನಂತಪುರಂ, ಅ. 20 (DaijiworldNews/MB) : ಬಿಜೆಪಿ ನಾಯಕಿ ಇಮಾರ್ತಿ ದೇವಿ ಅವರ ಬಗ್ಗೆ ಕಾಂಗ್ರೆಸ್ ಮುಖಂಡ ಕಮಲನಾಥ್ 'ಐಟಂ' ಎಂದು ಗೇಲಿ ಮಾಡಿರುವುದಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಆಕ್ಷೇಪ ವ್ಯಕ್ತಪಡಿಸಿದ್ದು ಇದೊಂದು ದುರದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಮಲ್ ನಾಥ್ ಜಿ ನಮ್ಮ ಪಕ್ಷದವರು. ಆದರೆ ವೈಯಕ್ತಿಕವಾಗಿ, ಅವರ ಪದ ಬಳಕೆ ನನಗೆ ಇಷ್ಟವಿಲ್ಲ. ಅಂತಹ ಹೇಳಿಕೆಗಳನ್ನು ಅವರು ಯಾರೆಂಬುದನ್ನು ಲೆಕ್ಕಿಸದೆ ಬೆಂಬಲಿಸಲಾರೆ. ಇದು ದುರದೃಷ್ಟಕರ ಎಂದು ಹೇಳಿದ್ದಾರೆ.
ಇನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಇಮರ್ತಿ ದೇವಿ ಬಗ್ಗೆ ಅಗೌರವ ಹೇಳಿಕೆಗಳನ್ನು ನೀಡಿಲ್ಲ, ಬಿಜೆಪಿ ಜನರನ್ನು ತಪ್ಪು ದಾರಿಗೆಳೆಯುತ್ತಿದೆ ಎಂದು ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ಅವರ 16 ವರ್ಷಗಳ ಆಡಳಿತದಲ್ಲಿ ರಾಜ್ಯದಲ್ಲಿ ಹೆಣ್ಣುಮಕ್ಕಳ ವಿರುದ್ಧ ಅಪರಾಧ, ಅತ್ಯಾಚಾರ ಕೇಸುಗಳು ಹೆಚ್ಚಾಗಿದ್ದು ರಾಜ್ಯವು ಅಪರಾಧ ಕೃತ್ಯಗಳಲ್ಲಿ ಉನ್ನತ ಸ್ಥಾನದಲ್ಲಿದೆ. ಆದರೆ ಇಷ್ಟು ದಿನ ನೀವ್ಯಾಕೆ ಮೌನವಾಗಿದ್ದೀರಿ. ಹೆಣ್ಣು ಮಕ್ಕಳ ಬಗ್ಗೆ ಅಷ್ಟೊಂದು ಗೌರವ, ಕಾಳಜಿಯಿದ್ದಿದ್ದರೆ ನೀವ್ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ನಮ್ಮ ಅಭ್ಯರ್ಥಿ ಸರಳ ವ್ಯಕ್ತಿ, ಆಕೆಯಂತಲ್ಲ, ಆಕೆಯ ಹೆಸರೇನು, ನನಗಿಂತ ಚೆನ್ನಾಗಿ ನಿಮಗೆಲ್ಲಾ ಆಕೆಯ ಬಗ್ಗೆ ತಿಳಿದಿದೆ. ನೀವು ಮೊದಲೇ ನನಗೆ ಎಚ್ಚರಿಕೆ ನೀಡಬೇಕಿತ್ತು. ಆಕೆ ಎಂತಹ ಐಟಮ್ ಎಂದು ಈ ಹಿಂದೆ ಕಮಲನಾಥ್ ಹೇಳಿದ್ದರು.