ಬೆಂಗಳೂರು, ಅ. 20 (DaijiworldNews/MB) : ನಗರದ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಗಲಭೆಯ ಆರೋಪಿಗಳೊಂದಿಗೆ ಮಾಜಿ ಮೇಯರ್ ಸಂಪತ್ ರಾಜ್ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ನಡೆದ ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದ ಗಲಭೆಕೋರನಾದ ಮುದಾಸೀರ್ ಅಲಿಯಾಸ್ ಮಜ್ಜು ಎಂಬಾತ, ''ಕಾಂಗ್ರೆಸ್ ಶಾಸಕ ಅಂಖಡ ಶ್ರೀನಿವಾಸ್ ಮನೆಗೆ ಬೆಂಕಿ ಹಾಕಿ ಮಾಜಿ ಮೇಯರ್ ಸಂಪತ್ ರಾಜ್ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ಧರಾಗಿರಿ ಎಂದು ತಿಳಿಸಿದ್ದೆವು'' ಎಂದು ಕೇಂದ್ರ ಅಪರಾಧ ಶಾಖೆ (ಸಿಸಿಬಿ) ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಈ ಹಿಂದೆ ವರದಿಯಾಗಿದೆ.
ಈ ಹಿನ್ನೆಲೆ ತನಿಖಾಧಿಕಾರಿಗಳು ಸಂಪತ್ ರಾಜ್ ಅವರ ಮತ್ತಷ್ಟು ಮಾಹಿತಿ ಕಲೆ ಹಾಕಿದಾಗ ಗಲಭೆಯ ಆರೋಪಿಗಳೊಂದಿಗೆ ಮಾಜಿ ಮೇಯರ್ ಸಂಪತ್ ರಾಜ್ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿರುವುದಾಗಿ ವರದಿ ತಿಳಿಸಿದೆ.
ಸಂಪತ್ ರಾಜ್ ಅವರು ಪ್ರಕರಣದಲ್ಲಿ ಬಂಧಿತ ಆರೋಪಿಗಳಾದ ಅರುಣ್, ಸಜ್ಜದ್ ಖಾನ್, ಮುಜಾಹಿದ್ ಪಾಷಾ, ಯಾಸೀನ್ ಜಾಕೀರ್, ವಾಜಿದ್ ಪಾಷಾ ಅವರೊಂದಿಗೆ ಆ.11ರ ಸಂಜೆ 6ರಿಂದ ತಡರಾತ್ರಿ 2 ಗಂಟೆವರೆಗೂ ದೂರವಾಣಿ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ.
ಪ್ರವಾದಿಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ನಡೆದಿದ್ದ ಗಲಭೆ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ.