ಬೆಂಗಳೂರು, ಅ. 20 (DaijiworldNews/MB) : ಮುಖ್ಯಮಂತ್ರಿ ಹುದ್ದೆ ಖಾಲಿ ಇದ್ದರೆ ಟವೆಲ್ ಹಾಕಬಹುದು. ಆದರೆ ಈಗ ಟವೆಲ್ ಹಾಕಲು ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ. ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಸೀಟ್ ಖಾಲಿ ಇಲ್ಲದಿರುವಾಗ ಟವೆಲ್ ಎಲ್ಲಿ ಹಾಕ್ತೀರಾ? ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಹೇಳಿಕೆಗೆ ಕಂದಾಯ ಸಚಿವ ಆರ್. ಅಶೋಕ್ ಅವರು ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಖಾಲಿ ಇಲ್ಲದ ಸೀಟ್ಗೆ ಟವೆಲ್ ಹಾಕಿ ವ್ಯರ್ಥ ಎಂದು ಹೇಳಿದ್ದು ಯಡಿಯೂರಪ್ಪನವರ ನೇತೃತ್ವದಲ್ಲಿ ನಾವು ಚುನಾವಣೆಯಲ್ಲಿ ವಿಜಯರಾಗಿದ್ದೇವೆ. ಅವರ ನೇತೃತ್ವದಲ್ಲೇ ಸರ್ಕಾರ ಮೂರು ವರ್ಷ ಪೂರೈಸಲಿದೆ. ಈ ಸಂದರ್ಭದಲ್ಲಿ ಖಾಲಿ ಇಲ್ಲದ ಸೀಟ್ಗೆ ಟವೆಲ್ ಹಾಕುವುದನ್ನು ಎಲ್ಲರೂ ನಿಲ್ಲಿಸಬೇಕು. ಇದು ಯಾರಿಗೂ ಒಳ್ಳೆಯದಲ್ಲ ಎಂದು ಹೇಳಿದರು.
ಇನ್ನು ಉಪಚುನಾವಣೆಗೆ ಸಂಬಂಧಿಸಿ ಮಾತನಾಡಿದ ಅವರು, ನಾವು ಚುನಾವಣೆಯಲ್ಲಿ ಜೆಡಿಎಸ್ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ, ಯಾವುದೇ ಕಾರಣಕ್ಕೂ ಮಾಡಿಕೊಳ್ಳಲ್ಲ. ಡಿಕೆ ಶಿವಕುಮಾರ್ ಅವರೇ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಜೆಡಿಎಸ್ನ್ನು ಮುಗಿಸಿದ್ದು. ಸ್ಥಳೀಯವಾಗಿ ನೋಡಿದರೆ ಅಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತ್ರ ಸ್ಪರ್ಧೆ ಇದ್ದಂತೆ ಕಾಣುತ್ತದೆ ಎಂದು ಹೇಳಿದ್ದಾರೆ.
ಯತ್ನಾಳ್ ಅವರು ತಮ್ಮ ಸ್ವಾರ್ಥಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗುವ ಹಗಲುಗನಸು ಕಾಣುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಚರ್ಚೆಯೇ ನಡೆದಿಲ್ಲ. ಇಂತಹ ಹೇಳಿಕೆಗಳನ್ನು ಯಾರು ನೀಡಿದರೂ ಪಕ್ಷ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತದೆ. ಯತ್ನಾಳ್ ವಿರುದ್ದ ಪಕ್ಷವು ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ತಿಳಿಸಿದ್ದಾರೆ.
ಯಡಿಯೂರಪ್ಪ ಇನ್ನು ಬಹಳ ದಿನ ಮುಖ್ಯಮಂತ್ರಿಯಾಗಿ ಉಳಿಯುವುದಿಲ್ಲ. ಉತ್ತರ ಕರ್ನಾಟಕದವರನ್ನು ಮುಖ್ಯಮಂತ್ರಿ ಮಾಡುವುದಾಗಿ ಮೋದಿ ಅವರು ಭರವಸೆ ನೀಡಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದರು.