ನವದೆಹಲಿ, ಅ 20 (DaijiworldNews/SM): ದೇಶದಲ್ಲಿ ಇದೀಗ ಹಬ್ಬಗಳ ಸರಣಿ. ಈ ಸಂದರ್ಭದಲ್ಲಿ ನಾವು ನಮ್ಮ ಜವಾಬ್ದಾರಿಯನ್ನು ಮರೆಯಬಾರದು. ಜವಾಬ್ದಾರಿ ಅರಿತುಕೊಂಡು ಹಬ್ಬಗಳನ್ನು ಆಚರಿಸೋಣ ಎಂಬಿವುದಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಹಬ್ಬಗಳ ಸೀಸನ್ನಲ್ಲಿ ನಾವು ಮತ್ತಷ್ಟು ಜವಾಬ್ದಾರಿಯಿಂದ ವರ್ತಿಸಬೇಕಿದೆ ಎಂದಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಉತ್ತಮವಾಗಿದೆ. ವಿಶ್ವದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ನಮ್ಮಲ್ಲಿ ಗುಣಮುಖರಾಗುತ್ತಿದ್ದಾರೆ. ನಾವು ಇದನ್ನು ಕಾಪಾಡಬೇಕಿದೆ ಎಂದವರು ತಿಳಿಸಿದ್ದಾರೆ.
ಭಾರತದಲ್ಲಿ ಕೊರೊನಾ ಗುಣಮುಖ ಪ್ರಮಾಣ ಶೇ.83ರಷ್ಟಿರುವುದು ನಮ್ಮ ಸಾಧನೆಯಾಗಿದೆ. ಯಾವುದೇ ರೀತಿಯಲ್ಲಿ ಬೇಜವಾಬ್ದಾರಿ ತೋರಿದ್ದಲ್ಲಿ ನಮ್ಮ ಪ್ರಾಣಕ್ಕೆ ಕುತ್ತು ಎದುರಾಗುತ್ತದೆ ಎಂಬುದನ್ನು ನಾವು ಮರೆಯಬಾರದು. ಕೊರೊನಾ ಲಸಿಕೆ ಬರುವವರೆಗೂ ನಾವು ಎಚ್ಚರದಿಂದಿರಬೇಕು. ಸರಣಿ ಹಬ್ಬಗಳು ದೇಶದಲ್ಲಿ ಹೊಸ ಚೈತನ್ಯ ತುಂಬಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ.
ಕೋವಿಡ್ ಪರಿಸ್ಥಿತಿಯ ಸಂದರ್ಭದಲ್ಲಿ ಆರ್ಥಿಕ ಪರಿಸ್ಥಿತಿ ಸಹ ಹದಗೆಟ್ಟಿದೆ. ಲಾಕ್ ಡೌನ್ ಮುಗಿದಿದೆ ಎಂದರೆ ವೈರಸ್ ಹೋಗಿದೆ ಎಂದು ಅರ್ಥವಲ್ಲ. ಹಬ್ಬದ ಸಂದರ್ಭದ ವಿಡಿಯೋಗಳನ್ನು ನಾವು ನೋಡುತ್ತಿದ್ದೇವೆ. ಜನರು ಕೊರೊನಾ ವೈರಸ್ ಬಗ್ಗೆ ಮರೆತಿದ್ದಾರೆ ಎನ್ನುವಂತೆ ತೋರುತ್ತಿದೆ. ಬಹಳಷ್ಟು ಮಂದಿ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದಾರೆ. ಇದರಿಂದ ನಿಮ್ಮ ಕುಟುಂಬವನ್ನು ನೀವು ಅಪಾಯಕ್ಕೆ ದೂಡುತ್ತಿದ್ದೀರಿ. ವ್ಯಾಕ್ಸಿನ್ ಬರುವ ತನಕ ಎಚ್ಚರಿಕೆಯಿಂದಿರಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.