ಮುಂಬೈ, ಅ. 21 (DaijiworldNews/MB) : ಬಿಲ್ಲವ ಅಸೋಸಿಯೇಷನ್ ಮುಂಬೈ ಮಾಜಿ ಅಧ್ಯಕ್ಷ, ಪ್ರಸ್ತುತ ಗೌರವ ಅಧ್ಯಕ್ಷರು, ಮುಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸ್ಥಾಪಕಾಧ್ಯಕ್ಷರು, ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬೈ) ಲಿಮಿಟೆಡ್ನ ಮಾಜಿ ಅಧ್ಯಕ್ಷರು, ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಾ ಬಿತ್ತಿಲು ಆಡಳಿತ ಸಮಿತಿಯ ಗೌರವ ಅಧ್ಯಕ್ಷರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಯ ಸಿ. ಸುವರ್ಣ ಅಕ್ಟೋಬರ್ 21 ರ ಬುಧವಾರ ಮುಂಜಾನೆ ಗೋರೆಗಾಂವ್ನಲ್ಲಿರುವ ತನ್ನ ನೀಲಗಿರಿ ನಿವಾಸದಲ್ಲಿ ನಿಧನರಾದರು.
74 ವರ್ಷದ ಅವರು, 1946 ರ ಮೇ 15 ರಂದು ಉಡುಪಿ ಜಿಲ್ಲೆಯ ಪಡುಬಿದ್ರಿ ಬಳಿ ಜನಿಸಿದರು. ಚಂದು ಪೂಜಾರಿ ಮತ್ತು ಅಚೂ ಪೂಜಾರ್ತಿ ದಂಪತಿಗೆ ಜನಿಸಿದ ಜಯ ಸುವರ್ಣ ಅವರು ಅಡ್ವೆಯಲ್ಲಿ ಶಿಕ್ಷಣ ಪಡೆದರು. 1974 ರಲ್ಲಿ ಮುಂಬೈನ ಅಂಧೇರಿಯಲ್ಲಿರುವ ಚಿನ್ನೈನಲ್ಲಿ ತನ್ನ ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದರು.
ಅವರು ಪತ್ನಿ ಲೀಲಾವತಿ ಜಯ ಸುವರ್ಣ ಮತ್ತು ನಾಲ್ವರು ಗಂಡು ಮಕ್ಕಳನ್ನು ಹಾಗೂ ಅಪಾರ ಬಂಧು, ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ಸಂಜೆ ಗೋರೆಗಾಂವ್ನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮಾಜಿ ಕೇಂದ್ರ ಸಚಿವ ಬಿ ಜನಾರ್ಧನ ಪೂಜಾರಿ, ಬಿಲ್ಲವರ ಅಸೋಸಿಯೇಶನ್ ಮುಂಬೈ ಅಧ್ಯಕ್ಷ ಚಂದ್ರಶೇಖರ್ ಎಸ್ ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ಎಲ್.ವಿ.ಅವಿನ್, ನಿತ್ಯಾನಂದ ಡಿ ಕೋಟ್ಯಾನ್, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲ ಮುಲ್ಕಿ ಇದರ ಅಧ್ಯಕ್ಷ ಡಾ.ರಾಜಶೇಖರ್ ಆರ್ ಕೋಟ್ಯಾನ್, ಬಿಲ್ಲವರ ಸಂಘದ ಕೇಂದ್ರ ಮತ್ತು ಸ್ಥಳೀಯ ಸಮಿತಿಗಳ ಎಲ್ಲಾ ಸದಸ್ಯರುಗಳು, ಭಾರತ್ ಬ್ಯಾಂಕಿನ ಅಧ್ಯಕ್ಷ ಶಿವಾಜಿ ಪೂಜಾರಿ (ಯುಎಸ್ ಪೂಜಾರಿ), ಉಪಾಧ್ಯಕ್ಷರಾದ ರೋಹಿಣಿ ಜೆ ಸಲಾನ್, ಬಿಸಿಬಿ ಮಾಜಿ ಅಧ್ಯಕ್ಷರಾದ ವಾಸುದೇವ ಆರ್ ಕೋಟ್ಯಾನ್ ಹಾಗೂ ಎಂಬಿ ಕುಕ್ಯಾನ್, ಬಿಸಿಸಿಐ ಅಧ್ಯಕ್ಷ ಎನ್.ಟಿ ಪೂಜಾರಿ ಮತ್ತು ದೇಶದ ನೂರಾರು ಎನ್ಜಿಒಗಳು ಮೃತರ ಅಗಳಿಕೆಗೆ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.