ಬೆಂಗಳೂರು, ಅ. 21 (DaijiworldNews/MB) : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಬುಧವಾರ ಪ್ರವಾಹ ಪೀಡಿತ ಪ್ರದೇಶಗಳಾದ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬೆಂಗಳೂರಿನಿಂದ ಬೆಳಿಗ್ಗೆ ಹೊರಡಲಿರುವ ಮುಖ್ಯಮಂತ್ರಿಗಳು ಯಾದಗಿರಿ, ರಾಯಚೂರು, ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಸಂಜೆ ವಾಪಾಸ್ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಜಿಂದಾಲ್ ವಿಮಾನ ನಿಲ್ದಾಣಕ್ಕೆ ತೆರಳಲಿರುವ ಮುಖ್ಯಮಂತ್ರಿ ಅಲ್ಲಿಂದ ವಾಯುಪಡೆಯ ಹೆಲಿಕಾಪ್ಟರ್ನಲ್ಲಿ ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ ಸಮೀಕ್ಷೆ ನಡೆಸಲಿದ್ದಾರೆ. ಬಳಿಕ ಕಲಬುರಗಿಯಲ್ಲಿ ಈ ಎರಡು ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ನಂತರ ಅಲ್ಲಿಂದ ವಿಜಯಪುರ ಜಿಲ್ಲೆಯ ಸಮೀಕ್ಷೆ ನಡೆಸಿ ಆಲಮಟ್ಟಿಯಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಬಳಿಕ ರಾಯಚೂರು ಜಿಲ್ಲೆಯ ಸಮೀಕ್ಷೆ ನಡೆಸಿ ಬಳ್ಳಾರಿಯ ತೋರಣಗಲ್ಲಿಗೆ ಮರಳಿ ಅಲ್ಲಿಂದ ಬೆಂಗಳೂರಿಗೆ ವಾಪಾಸ್ ತೆರಳಲಿದ್ದಾರೆ ಎಂದು ವರದಿ ತಿಳಿಸಿದೆ.