ಹುಬ್ಬಳ್ಳಿ, ಅ. 21 (DaijiworldNews/MB) : ಮುಂದಿನ ಚುನಾವಣೆಯಲ್ಲಿ ತಮಿಳುನಾಡು, ಪುದುಚೇರಿ ಮತ್ತು ಕೇರಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಗುರಿ ಪಕ್ಷ ಹೊಂದಿದೆ. ಬಿಜೆಪಿಯು ಕೇರಳ, ತಮಿಳುನಾಡು, ಪುದುಚೇರಿಗಳಲ್ಲೂ ಗೆಲ್ಲಲಿದೆ'' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿಯವರು ಮಂಗಳವಾರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರವಿ, ಪಕ್ಷವು ದಕ್ಷಿಣ ರಾಜ್ಯಗಳಲ್ಲಿ ಮಾತ್ರವಲ್ಲ, ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿಯೂ ವಿಜಯ ಮೆರವಣಿಗೆ ನಡೆಸುವ ಗುರಿ ಹೊಂದಿದೆ ಎಂದು ಹೇಳಿದರು.
"ನಮ್ಮಲ್ಲಿ ಒಂದು ಕಾರ್ಯತಂತ್ರವಿದೆ ಮತ್ತು ಈ ರಾಜ್ಯಗಳಲ್ಲಿ ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಈ ಕ್ಷೇತ್ರಗಳಲ್ಲಿ ನಾವು ಇಲ್ಲಿಯವರೆಗೆ ಗೆದ್ದಿಲ್ಲ. ದಕ್ಷಿಣ ರಾಜ್ಯಗಳ ಉಸ್ತುವಾರಿಯಾಗಿರುವ ಸಂದರ್ಭದಲ್ಲಿ ನನಗೆ ಉಸ್ತುವಾರಿ ನೀಡಿದ ಈ ಪ್ರದೇಶಗಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂಬ ವಿಶ್ವಾಸ ನಮಗೆ ಇದೆ" ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಆರು ವರ್ಷಗಳ ಅವಧಿಯನ್ನು 'ಸುಧಾರಣೆಗಳ ಸುವರ್ಣ ಯುಗ' ಎಂದು ಕರೆದಿರುವ ರವಿ ಅವರು, ಅನಗತ್ಯವಾಗಿದ್ದ 100 ಕ್ಕೂ ಹೆಚ್ಚು ಪುರಾತನ ನಿಯಮಗಳನ್ನು ಬೆಳವಣಿಗೆಗೆ ಆದ್ಯತೆ ನೀಡುವಂತೆ ಬದಲಾಯಿಸಲಾಗಿದೆ ಎಂದು ಹೇಳಿದರು.
"ಈ ಬದಲಾವಣೆಗಳು ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಫಲ ನೀಡುತ್ತವೆ. ಒಂಬತ್ತು ಕೋಟಿ ಶೌಚಾಲಯಗಳ ನಿರ್ಮಾಣ, ಭೂ ಸುಧಾರಣಾ ಕಾನೂನುಗಳು, ಕೃಷಿ ಕಾನೂನುಗಳ ತಿದ್ದುಪಡಿ, ಎಪಿಎಂಸಿ ಕಾನೂನುಗಳ ತಿದ್ದುಪಡಿ ಮೊದಲಾದವುಗಳ ಮೂಲಕ ಈ ಆಯಾ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತಂದು ಜನರಿಗೆ ಅಧಿಕಾರ ನೀಡಲಾಗಿದೆ" ಎಂದು ಅವರು ಹೇಳಿದರು.
ಉಪಚುನಾವಣೆಗಳಲ್ಲಿ ವಿಧಾನಸಭೆ ಎರಡೂ ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಬಿಜೆಪಿಗೆ ಇದೆ ಎಂದು ಅವರು ಈ ಸಂದರ್ಭದಲ್ಲೇ ಹೇಳಿದರು.