ಜೈಪುರ,ಅ. 21 (DaijiworldNews/HR): ವಿವಾದಿತ ಕೃಷಿ ಮಸೂದೆಯನ್ನು ತಡೆಯಲು ರಾಜಸ್ಥಾನ ಸರ್ಕಾರ ಹೊಸ ಮಸೂದೆಯನ್ನು ಜಾರಿಗೆ ತರಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಮುಖ್ಯಂತ್ರಿ ಅಶೋಕ್ ಗೆಹ್ಲೂಟ್ ಅವರು ಟ್ವೀಟ್ ಮಾಡಿದ್ದು, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಕೃಷಿ ಮಸೂದೆ ತಡೆಗೆ ನಾನು ಕೂಡ ಹೊಸ ಮಸೂದೆ ತರುವುದಾಗಿ ಹೇಳಿದ್ದಾರೆ. ಇತ್ತೀಚೆಗಷ್ಟೇ ಪಂಜಾಬ್ ಸರ್ಕಾರ ಕೂಡ ಕೃಷಿ ಮಸೂದೆ ತಡೆಗೆ ಅಧಿವೇಶನದಲ್ಲಿ ನಾಲ್ಕು ಮಸೂದೆಗಳನ್ನು ಮತ್ತು ನಿರ್ಣಯಗಳನ್ನು ಅಂಗೀಕರಿಸಿತ್ತು. ಅಂತೆಯೇ ರಾಜಸ್ಥಾನ ಸರ್ಕಾರ ಕೂಡ ಕೃಷಿ ಮಸೂದೆ ಜಾರಿಗೆ ತರುವುದಾಗಿ ಘೋಷಣೆ ಮಾಡುವುದಾಗಿ ಟ್ವೀಟ್ ಮಾಡಿದ್ದಾರೆ.
ಇನ್ನು ಈ ಹಿಂದೆ ಕೇಂದ್ರ ಸರ್ಕಾರ ರೂಪಿಸಿರುವ ಮೂರು ಕೃಷಿ ಕಾನೂನುಗಳ ವ್ಯಾಪ್ತಿಯಿಂದ ರಾಜ್ಯಗಳನ್ನು ಹೊರಗಿಡಲು ಸಾಧ್ಯವಾಗುವಂತೆ ರಾಜ್ಯಮಟ್ಟದಲ್ಲಿ ಕಾನೂನು ರಚಿಸುವ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದರು.
ಇನ್ನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ರೈತರ ಪರವಾಗಿ ನಿಂತಿದೆ ಮತ್ತು ಎನ್ಡಿಎ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾನೂನುಗಳನ್ನು ನಮ್ಮ ಪಕ್ಷ ವಿರೋಧಿಸುತ್ತಲೇ ಇರುತ್ತದೆ ಎಂದರು.