ಬೆಂಗಳೂರು,ಅ. 21 (DaijiworldNews/HR): ಸದೃಢ ಸಮಾಜಕ್ಕಾಗಿ ಸದಾ ದುಡಿಯುವ ನಮ್ಮ ಪೊಲೀಸರು ಮುಂದು ಮತ್ತು ಕೊರೊನಾ ಲಾಕ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡುವಲ್ಲಿ ಪೊಲೀಸರ ಶ್ರಮ ಶ್ಲಾಘನೀಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ಪೊಲೀಸ್ ಸಂಸ್ಮರಣ ದಿನಾಚರಣೆ ಅಂಗವಾಗಿ ನಗರ ಸಶಸ್ತ್ರ ಮೀಸಲು ಪಡೆಯ ಕೇಂದ್ರ ಸ್ಥಾನದ ಹುತಾತ್ಮರ ಉದ್ಯಾನವನದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕರ್ತವ್ಯದಲ್ಲಿದ್ದಾಗ ದೇಶಾದ್ಯಂತ ಒಟ್ಟಾರೆ 264 ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ. ಈ ಎಲ್ಲಾ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದರು.
ಇನ್ನು ಈ ಕುರಿತು ಟ್ವೀಟ್ ಮಾಡಿರುವ ಅವರು, ಇಂದು ಪೊಲೀಸ್ ಸಂಸ್ಮರಣಾ ದಿನದ ಅಂಗವಾಗಿ ಕರ್ತವ್ಯನಿರತರಾಗಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗೆ ಗೌರವನಮನ ಸಲ್ಲಿಸಲಾಯಿತು. ಸದೃಢ ಸಮಾಜಕ್ಕಾಗಿ ಸದಾ ದುಡಿಯುವ ನಮ್ಮ ಪೊಲೀಸರ ಕರ್ತವ್ಯನಿಷ್ಠೆ, ತ್ಯಾಗ ಮತ್ತು ಸೇವೆಗಳಿಗೆ ಹಾಗೂ ಅವರ ಕುಟುಂಬಗಳಿಗೆ ಕೃತಜ್ಞತೆ ವ್ಯಕ್ತಪಡಿಸಲಾಯಿತು. ಗೃಹಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು ಎಂದರು.