ಬೆಂಗಳೂರು,ಅ. 21 (DaijiworldNews/HR): ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪಚುನಾವಣೆ ಮುಗಿದ ಬಳಿಕ ಬಂಡೆ ಛಿದ್ರವಾಗುತ್ತದೆ, ಹುಲಿಯಾ ಕಾಡಿಗೆ ಹೋಗಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಕುರಿತು ಆರ್.ಆರ್ ನಗರ ಮಾಜಿ ಕಾರ್ಪೊರೇಟರ್ಗಳು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಳೀನ್, ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇವರಿಬ್ಬರ ಮಧ್ಯೆ ತಾಳಮೇಳವಿಲ್ಲದೆ ಕಾಂಗ್ರೆಸ್ ದಿಕ್ಕೆಟ್ಟು ಹೋಗಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಸಿಗುತ್ತಿರುವ ಜನ ಬೆಂಬಲದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ನಲ್ಲಿ ತಳಮಳ ಶುರುವಾಗಿದೆ ಎಂದರು.
ಸಿದ್ದರಾಮಯ್ಯ ಅವರಿಗೆ ಬಹುಮತ ಇದ್ದ ಸಂಧರ್ಭದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಜಾತಿ ರಾಜಕಾರಣ ಮಾಡಿದರು. ಟಿಪ್ಪು ಜಯಂತಿ ಮೂಲಕ ಸಮಾಜ ಒಡೆಯುವ ಪ್ರಯತ್ನ ಮಾಡಿದರೆ, ವೀರಶೈವ-ಲಿಂಗಾಯತ ಸಮಾಜವನ್ನೂ ಒಡೆಯುವ ಕೆಲಸ ಮಾಡಿದರು ಎಂದರು.
ಇನ್ನು ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಗುದ್ದಾಟವೇ ಕಾರಣವಾಗಿದೆ. ಗಲಭೆಯ ಪ್ರಮುಖ ಸೂತ್ರಧಾರ ಸಂಪತ್ರಾಜ್ ಅವರನ್ನು ಬಂಧಿಸಿ, ನ್ಯಾಯಾಂಗ ತನಿಖೆ ನಡೆಸಿ ಎಂದು ಹೇಳುವ ತಾಕತ್ತು ಇಬ್ಬರಿಗೂ ಇಲ್ಲ ಎಂದು ಹೇಳಿದ್ದಾರೆ.