ಬೆಂಗಳೂರು, ಅ. 22 (DaijiworldNews/MB) : ವಿಜಯಪುರದ ಬಿಜೆಪಿ ಶಾಸಕ ಮತ್ತು ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ದಿನದಿಂದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ವಿರುದ್ದ ವಾಗ್ದಾಳಿ ನಡೆಸುತ್ತಲ್ಲೇ ಇದ್ದು ಅಕ್ಟೋಬರ್ 19 ರಂದು ಯತ್ನಾಳ್ ಯಡಿಯೂರಪ್ಪ ಅವರನ್ನು ಲೇವಡಿ ಮಾಡಿ ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಹೆಚ್ಚು ಕಾಲ ಮುಂದುವರಿಯುವುದಿಲ್ಲ ಎಂದು ಹೇಳಿದ್ದರು. ಇದು ರಾಜ್ಯ ಬಿಜೆಪಿ ಮುಖಂಡರಿಗೆ ಮುಜುಗರವನ್ನುಂಟು ಮಾಡಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಪಕ್ಷದಲ್ಲಿ ಅಶಿಸ್ತು ತೋರಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ಶಾಸಕ ಯತ್ನಾಳ್ ನಡುವಿನ ಶೀತಲ ಸಮರ ರಾಜ್ಯ ಬಿಜೆಪಿಯಲ್ಲಿ ಗೊಂದಲವನ್ನು ಸೃಷ್ಟಿಸಿದೆ.
ಅಕ್ಟೋಬರ್ 20 ರ ಮಂಗಳವಾರ ಬಾಗಲಕೋಟೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇನ್ನೂ ಒಂದು ಅವಧಿಗೆ ಸಿಎಂ ಆಗಬೇಕೆಂಬ ಕನಸನ್ನು ವ್ಯಕ್ತಪಡಿಸಿದ್ದರು. ಮಾಜಿ ಸಚಿವ ಜಮೀರ್ ಅಹ್ಮದ್ ಕೂಡ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯನ್ನು ಬೆಂಬಲಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಳಿನ್ ಅವರು, ಈಗ ಮುಖ್ಯಮಂತ್ರಿ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಬಿ ಎಸ್ ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ನಳಿನ್, "ಬಿಜೆಪಿ ಅಶಿಸ್ತನ್ನು ಸಹಿಸುವುದಿಲ್ಲ. ಈ ರೀತಿ ಅಶಿಸ್ತು ಪ್ರದರ್ಶಿಸುವವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದರು.
ನಳಿನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದ ಸಂದರ್ಭದಲ್ಲಿ ಯತ್ನಾಳ್ ಅವರು ನಳಿನ್ ಅವರ ವಿರುದ್ದ ವಾಗ್ದಾಳಿ ನಡೆಸಿದ್ದರು. "ಉತ್ತರ ಕರ್ನಾಟಕದ ಬಗ್ಗೆ ಕಟೀಲ್ಗೆ ಏನೂ ತಿಳಿದಿಲ್ಲ. ಉತ್ತರ ಕರ್ನಾಟಕದ ಜನರಿಗೆ ನಳಿನ್ ಯಾರು ಎಂದು ತಿಳಿದಿಲ್ಲ. ಉತ್ತರ ಕರ್ನಾಟಕದಲ್ಲಿ ಅವರು ಏನು ಮಾಡುತ್ತಾರೆ? ಬಿಜೆಪಿ ಕಾರ್ಯಕರ್ತರು ಯಾರೂ ಅವರ ಮಾತುಗಳನ್ನು ಕೇಳುವುದಿಲ್ಲ" ಎಂದು ಹೇಳಿದರು.
ಬಿಜೆಪಿಯಲ್ಲಿ ಈಗ ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಒಳಜಗಳಗಳು ನಡೆಯುತ್ತಲ್ಲೇ ಇದ್ದು ರಾಜ್ಯ ಬಿಜೆಪಿ ಮುಖಂಡರಿಗೆ ಮುಜುಗರವನ್ನುಂಟು ಮಾಡಿದೆ.