ನವದೆಹಲಿ, ಅ. 22 (DaijiworldNews/MB) : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಕ್ಟೋಬರ್ 22 ರ ಗುರುವಾರ 56ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಅವರ ಜನ್ಮದಿನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭಶಾಯ ತಿಳಿಸಿದ್ದಾರೆ.
ಶುಭ ಹಾರೈಸಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಅಮಿತ್ಶಾ ಅವರಿಗೆ ಜನ್ಮದಿನದ ಶುಭಾಶಯಗಳು. ನಮ್ಮ ರಾಷ್ಟ್ರ ಭಾರತದ ಪ್ರಗತಿಗಾಗಿ ಅಮಿತ್ ಶಾ ಅವರ ಸಮರ್ಪಣೆ ಮತ್ತು ಶ್ರೇಷ್ಠತೆಯನ್ನು ಒಳಗೊಂಡ ಕೊಡುಗೆಗೆ ದೇಶ ಸಾಕ್ಷಿಯಾಗಿದೆ ಬಿಜೆಪಿಯನ್ನು ಬಲಪಡಿಸುವ ಅವರ ಪ್ರಯತ್ನಗಳೂ ಗಮನಾರ್ಹ. ಭಾರತದ ಸೇವೆಯಲ್ಲಿ ತೊಡಗಿರುವ ಅವರಿಗೆ ದೇವರು ಸುದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಆಶೀರ್ವದಿಸಲಿ ಎಂದು ಹಾರೈಸಿದ್ದಾರೆ.
ದೇಶಪ್ರೇಮ, ಸಮರ್ಪಣೆ, ಕಠಿಣ ಪರಿಶ್ರಮ, ಸಂಘಟನಾ ಕೌಶಲ್ಯ ಮತ್ತು ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿಯಾದ ಅಮಿತ್ಶಾ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಮಾನ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಸುದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಟ್ವೀಟಿಸಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಟ್ವೀಟ್ ಮಾಡಿ, ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಉತ್ತಮ ಆರೋಗ್ಯ, ಧೀರ್ಘಾಯುಷ್ಯ ಮತ್ತು ದೇಶಸೇವೆಯಲ್ಲಿ ಮತ್ತಷ್ಟು ಯಶಸ್ಸನ್ನು ನೀಡಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ಅಮಿತ್ ಶಾ ಅವರು 2014ರಿಂದ 2020ರ ವರೆಗೆ ಬಿಜೆಪಿ ಅಧ್ಯಕ್ಷರಾಗಿದ್ದು ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ತಮ್ಮ ತಂತ್ರಗಾರಿಕೆಯನ್ನು ಸಫಲವಾಗಿ ಬಳಸಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ತಂದು ಕೊಡುವಲ್ಲಿ ಇವರ ತೆರೆಮರೆಯ ಪಾತ್ರ ಬಿಜೆಪಿಯ ಈ ದೀರ್ಘ ಅಧಿಕಾರವಧಿಗೆ ಕಾರಣವಾಗಿದೆ.