ಬಾಗಪತ್, ಅ. 22 (DaijiworldNews/MB) : ಉತ್ತರ ಪ್ರದೇಶದಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿರುವ ಇಂತಿಝಾರ್ ಅಲಿ ಎಂಬವರು ಅನುಮತಿ ಪಡೆಯದೆ ಗಡ್ಡವನ್ನು ಬೆಳೆಸಿದ ಕಾರಣಕ್ಕಾಗಿ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಕ್ಷೌರ ಮಾಡುವಂತೆ ಅಥವಾ ಅಗತ್ಯವಾದ ಅನುಮತಿಯನ್ನು ಪಡಯುವಂತೆ ಮೂರು ಬಾರಿ ಸಬ್ ಇನ್ಸ್ಪೆಕ್ಟರ್ ಇಂತಿಝಾರ್ ಅಲಿ ಅವರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಪೊಲೀಸ್ ಅನುಮತಿ ಪಡೆಯದೆ ಗಡ್ಡವನ್ನು ಬೆಳೆಸಿಕೊಂಡಿದ್ದರು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಾಗಪತ್ನ ಎಸ್ಪಿ, ''ಪೊಲೀಸ್ ನಿಯಮದ ಪ್ರಕಾರ ಸಿಖ್ಖರಿಗೆ ಮಾತ್ರ ಗಡ್ಡವನ್ನು ಇಟ್ಟುಕೊಳ್ಳಲು ಅವಕಾಶವಿದ್ದು, ಉಳಿದ ಎಲ್ಲ ಪೊಲೀಸರು ಸ್ವಚ್ಛವಾಗಿ ಗಡ್ಡವನ್ನು ಕತ್ತರಿಸಿಕೊಳ್ಳಬೇಕು'' ಎಂದು ಹೇಳಿದ್ದಾರೆ.
''ಯಾವುದೇ ಪೊಲೀಸ್ ಸಿಬ್ಬಂದಿಯು ಗಡ್ಡವನ್ನು ಇಟ್ಟುಕೊಳ್ಳಲು ಬಯಸಿದರೆ ಅವರು ಅದಕ್ಕೆ ಅನುಮತಿ ಪಡೆಯಬೇಕು. ಇಂತಿಝಾರ್ ಅಲಿಯವರಿಗೆ ಅನುಮತಿ ಪಡೆಯುವಂತೆ ಪದೇ ಪದೇ ಹೇಳಲಾಗುತ್ತಿತ್ತು. ಆದರೆ ಅವರು ಅದನ್ನು ಪಾಲಿಸದೆ ಅನುಮತಿ ಪಡೆಯದೆಯೇ ಗಡ್ಡ ಬೆಳೆಸಿಕೊಂಡಿದ್ದಾರೆ'' ಎಂದು ಹೇಳಿದ್ದಾರೆ.
ಅಲಿಯವರು ಕಳೆದ ಮೂರು ವರ್ಷಗಳಿಂದ ಬಾಗಪತ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅಲಿಯವರು, ''ನಾನು ಗಡ್ಡವನ್ನು ಇಟ್ಟುಕೊಳ್ಳಲು ಅನುಮತಿ ಅರ್ಜಿ ಸಲ್ಲಿಸಿದ್ದೇನೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ'' ಎಂದು ತಿಳಿಸಿದ್ದಾರೆ.