ಚೆನ್ನೈ, ಅ. 22 (DaijiworldNews/MB) : ಕೊರೊನಾ ಲಸಿಕೆ ಲಭಿಸುವ ಮುನ್ನವೇ ಬಿಹಾರ ವಿಧಾನಸಭೆಯ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿಯು ಉಚಿತ ಕೊರೊನಾ ಲಸಿಕೆಯನ್ನು ನೀಡುವ ಭರವಸೆಯನ್ನು ನೀಡಿ ವಿವಾದ ಸೃಷ್ಟಿಸಿಕೊಂಡ ಬಳಿಕವೇ ಈಗ ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಅವರು ಉಚಿತ ಲಸಿಕೆ ನೀಡುವ ಘೋಷಣೆ ಮಾಡಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಮುಂದಿನ ವರ್ಷದ ವಿಧಾನಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ಕೊರೊನಾ ಲಸಿಕೆ ಲಭಿಸಿದ ಕೂಡಲೇ ರಾಜ್ಯದ ಎಲ್ಲ ಜನತೆಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆಯನ್ನು ಕೇಂದ್ರ ಹಣಕಾಸು ಸಚಿವೆ, ಬಿಜೆಪಿ ನಾಯಕಿ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಬಿಡುಗಡೆಗೊಳಿಸಿದ್ದಾರೆ. ಈ ಪ್ರಣಾಳಿಕೆಯಲ್ಲಿ ಬಿಜೆಪಿಯು ರಾಜ್ಯದ ಪ್ರತಿಯೊಬ್ಬರಿಗೂ ಉಚಿತ ಕೊರೊನಾ ಲಸಿಕೆ ಹಾಗೂ ಬಿಹಾರದ 19 ಲಕ್ಷ ಜನರಿಗೆ ಉದ್ಯೋಗ ನೀಡುವ ಭರವಸೆಯನ್ನು ನೀಡಿದೆ.