ನವದೆಹಲಿ, ಅ 22 (DaijiworldNews/SM) ದೇಶದಲ್ಲಿ ವಕ್ಕರಿಸಿರುವ ಕೊರೋನಾ ಸೋಂಕು ನಿಯಂತ್ರಣಕ್ಕೆ ಲಸಿಕೆ ಬೇಕೆಂಬುವುದೇ ಪ್ರತಿಯೊಬ್ಬರ ಆಸೆ. ಆದರೆ, ಈ ನಿಟ್ಟಿನಲ್ಲಿ ನಿರಂತರವಾದ ಶೋಧನೆ ಮುಂದುವರೆದಿದೆ. ಈ ನಡುವೆ ಇದೀಗ ಇದೇ ವಿಚಾರ ಚುನಾವಣಾ ಪ್ರಣಾಳಿಕೆಗೆ ಬಂದಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನವನ್ನು ಮೂಡಿಸಿದೆ.
ಮೂರು ಹಂತದ ಬಿಹಾರ ವಿಧಾನಸಭೆ ಚುನಾವಣೆಗೆ ಬಿಜೆಪಿ ಗುರುವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ರಾಜ್ಯದ ಪ್ರತಿಯೊಬ್ಬರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ಭರವಸೆ ನೀಡಲಾಗಿದೆ. ಆದರೆ, ದೇಶವನೇ ವಕ್ಕರಿಸಿದ ಕೊರೋನಾವನ್ನು ನಿಯಂತ್ರಿಸಲು ಲಸಿಕೆ ಕಂಡು ಹಿಡಿದು ವಿತರಿಸುವ ಜವಾಬ್ದಾರಿ ಕೇಂದ್ರ ಸರಕಾರ ಹಾಗೂ ಆರೋಗ್ಯ ಸಚಿವಾಲಯದ ಮೇಲೆದೆ. ಆದರೆ, ಇದೀಗ ಕೊರೋನಾ ಲಸಿಕೆಯಲ್ಲೂ ರಾಜಕೀಯ ಮಾಡುತ್ತಿರುವುದು ಎಷ್ಟು ಸರಿ ಎಂಬುವು ಪ್ರಶ್ನೆಯಾಗಿದೆ.
ಚುನಾವಣೆ ಗೆಲ್ಲುವ ಕಾರಣಕ್ಕೆ ಬಿಹಾರಕ್ಕೆ ಕೊರೋನಾ ಲಸಿಕೆ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಉಳಿದ ರಾಜ್ಯಗಳ ಗತಿಯೇನು ಎನ್ನುವುದು ಪ್ರಶ್ನೆಯಾಗಿ ಉಳಿದಿದೆ. ಉಳಿದ ರಾಜ್ಯಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆನಾ? ಅಥವಾ ಚುನಾವಣೆ ಬಂದಾಗ ಮಾತ್ರವೇ ಇತರ ರಾಜ್ಯಗಳತ್ತ ಮುಖಮಾಡುವುದಾಗಿ ಶಪತಮಾಡಲಾಗಿದೆಯಾ ಎನ್ನುವ ಪ್ರಶ್ನೆ ಕಾಡುತ್ತಿದೆ.
ಇನ್ನು ಬಿಜೆಪಿಯ ಈ ಭರವಸೆಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಟೀಕಿಸಿದ್ದಾರೆ. ಇದೇನಾ ನಿಮ್ಮ ಕೋವಿಡ್ ಲಸಿಕೆ ವಿತರಣಾ ಕಾರ್ಯತಂತ್ರ? ಕೇಂದ್ರ ಸರ್ಕಾರ ಈಗಷ್ಟೇ ತನ್ನ ಕೋವಿಡ್ ಲಸಿಕೆ ವಿತರಣಾ ಕಾರ್ಯತಂತ್ರ ಘೋಷಿಸಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷರು ರಾಹುಲ್ ಗಾಂಧಿ ಅವರು ಬಿಜೆಪಿಯ ಚುನಾವಣಾ ಪ್ರಣಾಳಿಕೆಗೆ ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ.
ಸುಳ್ಳು ಭರವಸೆಗಳೊಂದಿಗೆ ನೀವು ಅದನ್ನು ಯಾವಾಗ ಪಡೆಯುತ್ತೀರಿ ಎಂದು ತಿಳಿಯಲು ದಯವಿಟ್ಟು ರಾಜ್ಯವಾರು ಚುನಾವಣಾ ವೇಳಾಪಟ್ಟಿಯನ್ನು ಉಲ್ಲೇಖಿಸಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.