ಬೆಂಗಳೂರು, ಅ. 23 (DaijiworldNews/MB) : ಕೊರೊನಾ ಸಾಂಕ್ರಾಮಿಕ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ನಡೆಯುತ್ತಿದೆ. ಆದರೆ ಆನ್ಲೈನ್ ತರಗತಿಗಳಿಂದಾಗಿ ವಿದ್ಯಾರ್ಥಿಗಳಿಗೆ ಕಣ್ಣಿನ ಸಮಸ್ಯೆಗಳನ್ನು ಸೃಷ್ಟಿಸುತ್ತವೆ ಎಂಬುದು ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಕ್ಷಣ ಕಣ್ಣಿನ ತಜ್ಞರನ್ನು ಸಂಪರ್ಕಿಸಿ ಆನ್ಲೈನ್ ತರಗತಿಗಳಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸಚಿವ ಸುರೇಶ್ ಕುಮಾರ್ ಅವರು ಸಾರ್ವಜನಿಕ ಬೋಧನಾ ವಿಭಾಗದ ಆಯುಕ್ತರಿಗೆ ಪತ್ರವೊಂದನ್ನು ಬರೆದಿದ್ದಾರೆ. ಮಾರ್ಗಸೂಚಿ ಪ್ರಕಾರ ಆನ್ಲೈನ್ ತರಗತಿಗಳನ್ನು ನಡೆಸಿ ಅದಕ್ಕೆ ಅನುಗುಣವಾಗಿ ವರದಿ ನೀಡುವಂತೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಇದಲ್ಲದೆ, ಸಚಿವ ಸುರೇಶ್ ಕುಮಾರ್ ಅವರು ಕರ್ನಾಟಕದ ಎಲ್ಲಾ ಶಾಲೆಗಳಿಗೆ ವಿವರವಾದ ಸುತ್ತೋಲೆಯನ್ನು ಕಳುಹಿಸಿದ್ದಾರೆ. ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಈ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಆನ್ಲೈನ್ ಶಿಕ್ಷಣವು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ವಿದ್ಯಾರ್ಥಿಗಳ ಪೋಷಕರು ದೂರಿದ್ದರು. ಕೆಲವು ತಜ್ಞರು ಕಳುಹಿಸಿದ ವರದಿಯನ್ನು ಕೂಡಾ ಶಾಲೆಗಳು ಪರಿಗಣಿಸಿಲ್ಲ. ಶಾಲೆಗಳು ತಮ್ಮದೇ ಆದ ಆನ್ಲೈನ್ ಬೋಧನೆಯನ್ನು ಅನುಸರಿಸುತ್ತಿದ್ದು, ಇದು ವಿದ್ಯಾರ್ಥಿಗಳ ಕಣ್ಣಿಗೆ ತೊಂದರೆ ಉಂಟುಮಾಡುತ್ತಿದೆ.
ಈ ನಿಟ್ಟಿನಲ್ಲಿ ಶಾಲೆಗಳಿಗೆ ಆನ್ಲೈನ್ ಶಿಕ್ಷಣ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಆದೇಶ ನೀಡಲಾಗಿದೆ. ವರದಿಯ ಪ್ರಕಾರ, ಆಫ್ಲೈನ್ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದ್ದು ಆನ್ಲೈನ್ ಶಿಕ್ಷಣವು ಬರೀ ಪೂರಕವಾಗಿರಬೇಕು. ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ರಾಜ್ಯದಲ್ಲಿ ಆನ್ಲೈನ್ ಶಿಕ್ಷಣವನ್ನು ಜಾರಿಗೆ ತರಲು ಶಿಫಾರಸು ಮಾಡಲಾಗಿದೆ.
ತಜ್ಞರ ಸಮಿತಿಯು ಸರ್ಕಾರಕ್ಕೆ ಒದಗಿಸಿರುವ ವರದಿಯಲ್ಲಿನ ಪ್ರಮುಖ ಅಂಶಗಳು ಹೀಗಿವೆ:
* ಆನ್ಲೈನ್ ಶಿಕ್ಷಣವು ಮಿತಿಯಲ್ಲಿರಬೇಕು. ಈಡೀ ದಿನ ಆನ್ಲೈನ್ ತರಗತಿಗಳನ್ನು ನಡೆಸಬಾರದು.
* ಆನ್ಲೈನ್ ಮತ್ತು ಆಫ್ಲೈನ್ ವಿಧಾನಗಳಲ್ಲಿ ತರಗತಿಗಳನ್ನು ನಡೆಸಬೇಕು.
* ಕೊರೊನಾವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಆನ್ಲೈನ್ ಶಿಕ್ಷಣವನ್ನು ತಾತ್ಕಾಲಿಕವೆಂದು ಪರಿಗಣಿಸಬೇಕು. ಇದು ಶಾಶ್ವತ ಪರಿಹಾರವಲ್ಲ.
* ಶಾಲೆಗಳು ಅಧಿಕೃತವಾಗಿ ತೆರೆದ ನಂತರ ಆನ್ಲೈನ್ ಶಿಕ್ಷಣವನ್ನು ಮುಂದುವರಿಸಬಾರದು ನಡೆಸಬೇಕು.
* ಪೂರ್ವ-ಪ್ರಾಥಮಿಕ ಶಾಲಾ ಮಕ್ಕಳ ಪೋಷಕರೊಂದಿಗೆ ಆನ್ಲೈನ್ ಸಂವಹನ, 30 ನಿಮಿಷ ಮೀರದೆ, ವಾರಕ್ಕೊಮ್ಮೆ ನಡೆಸಬೇಕು.
* 1 ರಿಂದ 5 ನೇ ತರಗತಿಗೆ 30 ರಿಂದ 55 ನಿಮಿಷಗಳ ಎರಡು ತರಗತಿಗಳನ್ನು ಪರ್ಯಾಯ ದಿನಗಳಲ್ಲಿ ವಾರದಲ್ಲಿ ಗರಿಷ್ಠ ಮೂರು ದಿನಗಳವರೆಗೆ ಮಾತ್ರ ನಡೆಸಬೇಕು.
* 6 ರಿಂದ 8 ನೇ ತರಗತಿಗೆ ವಾರಕ್ಕೆ ಗರಿಷ್ಠ ಐದು ದಿನಗಳವರೆಗೆ ದಿನಕ್ಕೆ 30 ರಿಂದ 45 ನಿಮಿಷಗಳ ಎರಡು ತರಗತಿಗಳನ್ನು ಮಾತ್ರ ನಡೆಸಬೇಕು.
* 9 ಮತ್ತು 10 ನೇ ತರಗತಿಗೆ ವಾರದಲ್ಲಿ ಗರಿಷ್ಠ ಐದು ದಿನಗಳವರೆಗೆ ದಿನಕ್ಕೆ 30 ರಿಂದ 45 ನಿಮಿಷಗಳ ನಾಲ್ಕು ತರಗತಿಗಳನ್ನು ಮಾತ್ರ ನಡೆಸಬೇಕು.