ಪಟ್ನಾ, ಅ. 23 (DaijiworldNews/MB) : ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಶುಕ್ರವಾರ ಆಯೋಜನೆ ಮಾಡಿರುವ ಮೂರು ಚುನಾವಣಾ ಪ್ರಚಾರ ರ್ಯಾಲಿಗಳನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾಷಣ ಮಾಡಲಿದ್ದಾರೆ. ಇಂದಿನ ಮೂರು ರ್ಯಾಲಿ ಸೇರಿದಂತೆ ಪ್ರಧಾನಿಯವರು ಒಟ್ಟು 12 ಚುನಾವಣಾ ಪ್ರಚಾರ ಸಭೆಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ವರದಿ ತಿಳಿಸಿದೆ.
ಮೋದಿಯವರು ಇಂದು ನಡೆಯಲಿರುವ ಸಸಾರಾಮ್, ಗಯಾ ಮತ್ತು ಭಗಲ್ಪುರಗಳಲ್ಲಿ ರ್ಯಾಲಿಗಳು, ಅಕ್ಟೋಬರ್ 28ರಂದು ನಡೆಯಲಿರುವ ದರ್ಭಾಂಗ, ಮುಜಾಫರ್ಪುರ ಹಾಗೂ ಪಟ್ನಾ ರ್ಯಾಲಿಗಳು, ನವೆಂಬರ್ 3ರಂದು ಛಪ್ರಾ, ಪೂರ್ವ ಚಂಪರಣ್, ಸಮಷ್ಠಿಪುರ, ಪಶ್ಚಿಮ ಚಂಪರಣ್, ಸಹಸ್ರ ಹಾಗೂ ಅರಾರಿಯಾಗಳಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾತನಾಡಿರುವ ಬಿಜೆಪಿಯ ಬಿಹಾರ ಉಸ್ತುವಾರಿ ದೇವೇಂದ್ರ ಪಡ್ನವೀಸ್, ಜನರಲ್ಲಿ ನಾವೀಗ ಉತ್ಸಾಹ ಕಾಣುತ್ತಿದ್ದೇವೆ. ಬಿಹಾರದ ಯಾವ ಮೂಲೆಗೆ ಹೋದರೂ ಕೂಡಾ ಜನರ ಬಾಯಲ್ಲಿ ಮೋದಿ ಹೆಸರು ಕೇಳಿಬರುತ್ತಿದೆ. ಮೋದಿಯವರ ಮೇಲೆ ಈಡೀ ದೇಶವೇ ನಂಬಿಕೆ ಇರಿಸಿದೆ. ಈ ನಂಬಿಕೆಯು ಬಿಜೆಪಿಗೆ ಮಾತ್ರವಲ್ಲದೇ ಮಿತ್ರಪಕ್ಷಕ್ಕೂ ನೆರವಾಗಲಿದೆ ಎಂದು ಹೇಳಿದ್ದಾರೆ.
243 ಸದಸ್ಯಬಲದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 121 ಸ್ಥಾನಗಳಲ್ಲಿ ಹಾಗೂ ಜೆಡಿಯು 122 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿವೆ. ಕೇಂದ್ರದಲ್ಲಿ ಎನ್ಡಿಎ ಒಕ್ಕೂಟದಲ್ಲಿರುವ ಎಲ್ಜೆಪಿ ಬಿಹಾರದಲ್ಲಿ ಜೆಡಿಯು ಜತೆಗಿನ ಮೈತ್ರಿ ವಿರೋಧಿಸಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿ 143 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.