ಹೊಶಿಯಾರ್ಪುರ, ಅ. 23 (DaijiworldNews/HR): ಪಂಜಾಬ್ ನ ಜಲಾಲ್ಪುರ ಗ್ರಾಮದಲ್ಲಿಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಂದು ಬಳಿಕ ಬೆಂಕಿ ಹಚ್ಚಿದ್ದು, ಅರೆ ಬೆಂದ ಬಾಲಕಿಯ ದೇಹ ಪತ್ತೆಯಾಗಿದೆ ಎಂಬುದಾಗಿ ಪೊಲೀಸರು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಪ್ರೀತ್ ಸಿಂಗ್ ಹಾಗೂ ಆತನ ಅಜ್ಜ ಸುರ್ಜೀತ್ ಸಿಂಗ್ನನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಕೊಲೆ, ಅತ್ಯಾಚಾರ ಹಾಗೂ ಪೊಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ಗುರುಪ್ರೀತ್ ಎಂಬಾತ ಬಾಲಕಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆಯ ತಂದೆ ಆಪಾದಿಸಿದ್ದಾರೆ. ಆ ಬಳಿಕ ಗುರುಪ್ರೀತ್ ಮತ್ತು ಸುರ್ಜೀತ್ ಆಕೆಯನ್ನು ಕೊಲೆ ಮಾಡಿ ದೇಹವನ್ನು ಸುಟ್ಟು ಹಾಕಿದ್ದಾರೆ. ಅರ್ಧ ಸುಟ್ಟ ಬಾಲಕಿಯ ದೇಹ ಅವರ ಮನೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಇದೊಂದು ಆಘಾತಕಾರಿ ಘಟನೆಯಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರೂ ಕೂಡ ತಕ್ಷಣ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ ಬಾಲಕಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಡಿಜಿಪಿಯವರಿಗೆ ಆದೇಶ ನೀಡಿದ್ದೇನೆ ಎಂದರು.