ಬೆಳಗಾವಿ, ಅ. 23 (DaijiworldNews/MB) : ತಂದೆ ಸೋಫಾ ಸೆಟ್ ತರಲಿಲ್ಲವೆಂದು ಕೋಪಗೊಂಡ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ನಡೆದಿದೆ.
19 ವರ್ಷದ ಜ್ಯೋತಿ ಆತ್ಮಹತ್ಯೆ ಮಾಡಿಕೊಂಡ ಯುವತಿ.
ಮೂರು ತಿಂಗಳ ಹಿಂದಷ್ಟೆ ಈಕೆಯು ತಾನು ಪ್ರೀತಿಸಿದ ಹುಡುಗನಾದ ಉಚಗಾಂವ್ ಗ್ರಾಮದ ನಿಖಿಲ್ ಎಂಬವನ ಜೊತೆ ವಿವಾಹವಾಗಿದ್ದು ನಾಲ್ಕು ದಿನಗಳ ಹಿಂದೆ ತವರಿಗೆ ಆಗಮಿಸಿದ್ದಳು. ತಾನು ಕುಳಿತುಕೊಳ್ಳಲು ಸೋಫಾ ಸೆಟ್ ಬೇಕೆಂದು ಒತ್ತಾಯ ಮಾಡಿದ್ದ ಈಕೆಗೆ ತಂದೆಯು ಮುಂದೆ ಯಾವಗಲಾದರೂ ಖರಿದೀಸೋಣ ಎಂದು ಹೇಳಿದ್ದರು.
ಬಳಿಕ ಸೋಫಾದ ವಿಚಾರವಾಗಿಯೇ ಮನೆಯಲ್ಲಿ ಜಗಳ ಮಾಡಿದ್ದಳು ಎಂದು ಹೇಳಲಾಗಿದೆ. ತಂದೆ ಮಗಳಿಗೆ ಸರ್ಪ್ರೈಸ್ ನೀಡುವ ಉದ್ದೇಶದಿಂದ ಸೋಫಾ ಖರೀದಿಸುವ ಬಗ್ಗೆ ಮಗಳಿಗೆ ತಿಳಿಸದೆ ಮಾರುಕಟ್ಟೆಗೆ ತೆರಳಿ ಸೋಫಾ ಸೆಟ್ ತಂದ ಬಳಿಕ ಕೋಣೆಯಲ್ಲಿದ್ದ ಜ್ಯೋತಿಯನ್ನು ಕರೆದಾಗ ಬಾರದ ಕಾರಣ ಬಾಗಿಲು ಒಡೆದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಇನ್ನು ಜ್ಯೋತಿಗೆ ತನ್ನ ಮದುವೆ ಲಾಕ್ಡೌನ್ ಸಂದರ್ಭದಲ್ಲಿ ಸರಳವಾಗಿ ಆದ ಕಾರಣದಿಂದಾಗಿ ಬೇಸರವಿತ್ತು ಹಾಗೂ ಆಕೆಗೆ ಅದ್ದೂರಿ ಜೀವನದ ಆಸೆಗಳು ಹೆಚ್ಚಾಗಿದ್ದವು ಎನ್ನಲಾಗಿದೆ.