ನವದೆಹಲಿ, ಅ. 23 (DaijiworldNews/MB) : ಗಾಜಿಯಾಬಾದ್ನ ವಾಲ್ಮೀಕಿ ಸಮುದಾಯದ 236 ಮಂದಿ ಬೌದ್ಧಧರ್ಮವನ್ನು ಸ್ವೀಕರಿಸಿದ ಬಳಿಕ ಧಾರ್ಮಿಕ ಮತಾಂತರದ ಬಗ್ಗೆ ವದಂತಿಗಳನ್ನು ಹರಡುವ ಮೂಲಕ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಜಿಲ್ಲಾ ಪೊಲೀಸರು 'ಅಪರಿಚಿತ ವ್ಯಕ್ತಿ' ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಅದೇ ಸಮುದಾಯದ ವ್ಯಕ್ತಿಯೊಬ್ಬರು ಈ ಆರೋಪವನ್ನು ಮಾಡಿದ್ದು ಪೊಲೀಸರನ್ನು ಸಂಪರ್ಕಿಸಿ ಎಫ್ಐಆರ್ ದಾಖಲಿಸಿದ್ದಾರೆ.
ದೂರುದಾರ, ಮೊಂಟು ಚಂಡೇಲ್ ವಾಲ್ಮೀಕಿ, ಜಾತಿ ಆಧಾರಿತ ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಸಲುವಾಗಿ ಈ ಮತಾಂತರ ಮಾಡಲಾಗುತ್ತಿದ್ದು ಇದು ಕ್ರಿಮಿನಲ್ ಪಿತೂರಿ ಎಂದು ಆರೋಪಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮತಾಂತರದ ಪ್ರಮಾಣಪತ್ರಗಳಲ್ಲಿ ಬೌದ್ಧಧರ್ಮವನ್ನು ಸ್ವೀಕರಿಸಿದ ಸದಸ್ಯರ ಹೆಸರು, ದಿನಾಂಕ, ವಿಳಾಸ ಮತ್ತು ನೋಂದಣಿ ಸಂಖ್ಯೆಗಳು ಇರುವುದಿಲ್ಲ ಎಂದು ಚಂಡೇಲ್ ಆರೋಪಿಸಿದ್ದಾರೆ.
"ಸ್ವೀಕರಿಸಿದ ದೂರಿನ ಆಧಾರದ ಮೇಲೆ ನಾವು ಇಂದು ಎಫ್ಐಆರ್ ದಾಖಲಿಸಿದ್ದೇವೆ. ತನಿಖೆ ನಡೆಸಲಾಗುತ್ತಿದೆ ಎಂದು ಘಜಿಯಾಬಾದ್ ಪೊಲೀಸ್ ಅಧೀಕ್ಷಕ ಘ್ಯಾನೇಂದ್ರ ಸಿಂಗ್ ತಿಳಿಸಿದ್ದಾರೆ.
ಅಕ್ಟೋಬರ್ 14 ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ರಾಜರತನ್ ಅಶೋಕ್ ರಾವ್ ಅಂಬೇಡ್ಕರ್ ಅವರ ಸಮ್ಮುಖದಲ್ಲಿ ಈ ಮತಾಂತರವನ್ನು ಮಾಡಲಾಯಿತು. ನಂತರ, ಬೌದ್ಧ ಸೊಸೈಟಿ ಆಫ್ ಇಂಡಿಯಾ ಮತಾಂತರಗೊಂಡ ಸದಸ್ಯರಿಗೆ ಪ್ರಮಾಣಪತ್ರಗಳನ್ನು ವಿತರಿಸಿತು. ಇವೆಲ್ಲಾ ಬೆಳವಣಿಗೆಗಳು ಹತ್ರಸ್ನಲ್ಲಿ ದಲಿತ ಯುವತಿಯ ಮೇಲೆ ನಾಲ್ಕು ಮೇಲ್ಜಾತಿಯ ಯುವಕರು ಅತ್ಯಾಚಾರ ನಡೆಸಿ ಹತ್ಯೆಗೈದ ಬಳಿಕ ನಡೆದಿದೆ.