ಕಲಬುರಗಿ, ಅ. 23 (DaijiworldNews/MB) : ಈ ಹಿಂದೆ ಲಾಕ್ಡೌನ್ ಸಂದರ್ಭದಲ್ಲಿ ಜನ್ಮದಿನ ಆಚರಿಸಿ ಅಭಿಮಾನಿಗಳಿಂದ ಹಾಲಿನ ಅಭಿಷೇಕ ಮಾಡಿಸಿಕೊಂಡು ಅಮಾನತ್ತಿಗೆ ಒಳಗಾಗಿದ್ದ ಜೇವರ್ಗಿ ತಾಲ್ಲೂಕಿನ ನೆಲೋಗಿ ಠಾಣೆ ಪಿಎಸ್ಐ ಮಲ್ಲಣ್ಣ ಯಲಗೋಡ ಅವರನ್ನು ಭೀಮಾ ನದಿ ಪ್ರವಾಹದ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವ ಉದ್ದೇಶದಿಂದ ಮೇಕೆ ಮರಿಯನ್ನು ರಕ್ಷಿಸುವಂತೆ ನಾಟಕವಾಡಿದ ಕಾರಣಕ್ಕಾಗಿ ಈಗ ಮತ್ತೆ ಅಮಾನತು ಮಾಡಲಾಗಿದೆ.
ಎಸ್ಪಿ ಡಾ.ಸಿಮಿ ಮರಿಯಮ್ ಜಾರ್ಜ್ ಅವರು ಪಿಎಸ್ಐ ಮಲ್ಲಣ್ಣ ಯಲಗೋಡ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮೇಕೆ ಮರಿಯನ್ನು ತನ್ನಿ, ಮತ್ತೆ ಅದನ್ನು ರಕ್ಷಿಸುವಂತೆ ನಾಟಕ ಮಾಡಿ ಅದನ್ನು ಟಿ.ವಿ. ಪತ್ರಿಕೆಗಳಿಗೆ ನೀಡೋಣ ಎಂದು ಮಲ್ಲಣ್ಣ ಗ್ರಾಮಸ್ಥರಿಗೆ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿತ್ತು. ಮಲ್ಲಣ್ಣ ಈ ಹಿಂದೆ ಲಾಕ್ಡೌನ್ ಸಂದರ್ಭದಲ್ಲಿ ಜನ್ಮದಿನ ಆಚರಿಸಿ ಅಭಿಮಾನಿಗಳಿಂದ ಹಾಲಿನ ಅಭಿಷೇಕ ಮಾಡಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರನ್ನು ಅಮಾನತು ಮಾಡಲಾಗಿತ್ತು.