ಮೈಸೂರು, ಅ.23 (DaijiworldNews/PY): ಸಿದ್ದರಾಮಯ್ಯ ಅವರಿಗೆ ಡಿ.ಕೆ.ಶಿವಕುಮಾರ್ ಹಾಗೂ ಈಶ್ವರಪ್ಪ ಅವರ ಭಯ ಕಾಡುತ್ತಿದೆ. ಸಿದ್ದರಾಮಯ್ಯ ಅವರು ಹೊಗಳುಭಟ್ಟರಿಂದ ಮೊದಲು ದೂರ ಸರಿಯಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಎಚ್. ವಿಶ್ವನಾಥ್ ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ನಲ್ಲಿ ಗೌರವ ದೊರಕುತ್ತಿಲ್ಲ. ರಾಜರು ಹೊಗಳುಭಟ್ಟರ ನಂಬಿ ಉಳಿದಿಲ್ಲ. ಹಾಗಾಗಿ ನಾನು ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತೇನೆ. ಅವರು ಮೊದಲು ಹೊಗಳುಭಟ್ಟರಿಂದ ದೂರವಿರಬೇಕು ಎಂದಿದ್ದಾರೆ.
ಬಿಹಾರದಲ್ಲಿ ಕೊರೊನಾ ಲಸಿಕೆಯ ಪ್ರಣಾಳಿಕೆ ಬಿಡುಗಡೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಈ ಬಗ್ಗೆ ರಾಜಕೀಯವನ್ನು ತರುವುದು ಸರಿಯಲ್ಲ. ಓಟ್ ಹಾಕಿ ಗೆಲ್ಲಿಸಿದರೆ ಮಾತ್ರ ಲಸಿಕೆ ನೀಡುತ್ತೀರಾ? ಸೋತರೆ ಜನರನ್ನು ಸಾಯಿಸುತ್ತೀರಾ?. ಈ ವಿಚಾರವನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ನಳಿನ್ ಕುಮಾರ್ ಕಟೀಲ್ ಅವರನ್ನು ಕಾಡುಮನುಷ್ಯ ಎಂದು ಹೇಳಿರುವ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಪಕ್ಷದ ರಾಜ್ಯಾಧ್ಯಕ್ಷನನ್ನು ಕಾಡುಮನುಷ್ಯ ಎನ್ನುವುದು ತರವೇ?. ಇದು ಅರಣ್ಯ ಸಂರಕ್ಷಕರಿಗೆ ಮಾಡಿದಂತ ದೊಡ್ಡ ಅಪಮಾನವಾಗಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರೇ, ನಿಮ್ಮ ಭಾಷೆಯ ಮೇಲೆ ಹಿಡಿತವಿರಲಿ. ನೀವು ರಾಜಕೀಯ ಮುತ್ಸದ್ದಿಯಾಗಿ ಹೇಳಿರುವ ಮಾತುಗಳನ್ನು ಹಿಂತೆಗೆದುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.