ನವದೆಹಲಿ, ಅ.23 (DaijiworldNews/PY): ಸೊಮಾಲಿಯಾದಲ್ಲಿ ಸಿಲುಕಿರುವ 33 ಭಾರತೀಯರನ್ನು ಭಾರತಕ್ಕೆ ವಾಪಾಸ್ಸು ಕರೆತರಲು ಪ್ರಯತ್ನ ಮಾಡುತ್ತಿದ್ದು, ಈ ಬಗ್ಗೆ ನೈರೊಬಿಯಲ್ಲಿನ ರಾಜತಾಂತ್ರಿಕ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಉತ್ತರಪ್ರದೇಶದ 25 ಕಾರ್ಮಿಕರು ಸೇರಿದಂತೆ ಭಾರತೀಯರನ್ನು ಸೊಮಾಲಿಯಾದ ಕಂಪೆನಿಯೊಂದು ಕಳೆದ ಎಂಟು ತಿಂಗಳಿನಿಂದ ಒತ್ತೆಯಾಗಿರಿಸಿಕೊಂಡಿದೆ.
ಸೊಮಾನಿಯಾದ ಕಂಪೆನಿಯೊಂದಕ್ಕೆ 33 ಭಾರತೀಯ ಕಾರ್ಮಿಕರು 10 ತಿಂಗಳ ಹಿಂದೆ ಸೇರಿದ್ದರು. ಭಾರತೀಯ ಕಾರ್ಮಿಕರು ಸೇರ್ಪಡೆಗೊಂಡ ಮೊದಲ ಎರಡು ತಿಂಗಳುಗಳ ಕಾಲ ಕಾರ್ಮಿಕರೊಂದಿಗೆ ಉತ್ತಮವಾದ ರೀತಿಯಲ್ಲಿ ವ್ಯವಹರಿಸುತ್ತಿದ್ದರು. ಎರಡು ತಿಂಗಳ ನಂತರ ಕಾರ್ಮಿಕರಿಗೆ ವೇತನವನ್ನೂ ನೀಡದೇ ಕಿರುಕುಳ ಕೊಡುತ್ತಿದ್ದರು ಎನ್ನಲಾಗಿದೆ.
ಈ 33 ಭಾರತೀಯ ಕಾರ್ಮಿಕರು ಸೊಮಾಲಿಯಾದ ಮೊಗದಿಶುವಿನಲ್ಲಿ ಸಿಲುಕಿದ್ದು, ಅವರನ್ನು ತಾಯ್ನಾಡಿಗೆ ವಾಪಾಸ್ಸು ಕರೆತರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ನೈರೊಬಿಯಾ ಅಧಿಕಾರಿಗಳು ಪ್ರಯತ್ನಪಡುತ್ತಿದ್ದಾರೆ. ಅವರನ್ನು ವಾಪಾಸ್ಸು ಕರೆತರಲು ಹಾಗೂ ಪರಿಹಾರ ಕಲ್ಪಿಸಲು ಭಾರತದಲ್ಲಿರುವ ಸೊಮಾಲಿಯಾ ರಾಯಭಾರ ಕಚೇರಿಯೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.