ಪಣಜಿ, ಅ.23 (DaijiworldNews/PY): ವಿಮಾನ ಹಾರಾಡುತ್ತಿರುವ ಸಂದರ್ಭ ಪ್ರಯಾಣಿಕನೋರ್ವ ವಿಮಾನದಲ್ಲಿ ಉಗ್ರನಿದ್ದಾನೆ ಎಂದು ಹೇಳಿ ಆತಂಕ ಸೃಷ್ಠಿಸಿದ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಗುರುವಾರದಂದು ದೆಹಲಿಯಿಂದ ಗೋವಾಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವ ವಿಮಾನ ಉಗ್ರನಿದ್ದಾನೆ ಎಂದು ಹೇಳಿದ್ದು, ಸ್ವಲ್ಪ ಸಮಯ ಎಲ್ಲರಲ್ಲೂ ಆತಂಕ ಮನೆಮಾಡಿತ್ತು.
ವಿಮಾನ ಟೇಕ್ ಆಫ್ ಆಗಿ ಗೋವಾದ ಕಡೆ ಹೋಗುತ್ತಿತ್ತು. ಈ ವೇಳೆ ದೆಹಲಿಯ ಓಖ್ಲಾದ ನಿವಾಸಿ ಇಯಾ ಉಲ್ ಹಕ್ ಎಂಬ ಪ್ರಯಾಣಿಕ ಈ ವಿಮಾನದಲ್ಲಿ ಓರ್ವ ಉಗ್ರನಿದ್ದಾನೆ. ನಾನು ದೆಹಲಿ ಪೊಲೀಸ್ ಇಲಾಖೆ ವಿಶೇಷ ಘಟಕದ ಅಧಿಕಾರಿ ಎಂದು ಹೇಳಿದ್ದಾನೆ.
ವಿಮಾನ ಹಾರಾಡುತ್ತಿರುವ ವೇಳೆಯೇ ಪೈಲಟ್ ಗೋವಾ ವೈಮಾನಿಕ ಸಂಚಾರ ನಿಯಂತ್ರಣ ಘಟಕಕ್ಕೆ ಮಾಹಿತಿ ರವಾನಿಸಿದ್ದಾರೆ. 3.30ರ ವೇಳೆ ಗೋವಾದಲ್ಲಿ ವಿಮಾನ ಇಳಿಯುತ್ತಿದ್ದಂತೆ ಆ ವ್ಯಕ್ತಿಯನ್ನು ಬಂಧಿಸಲಾಗಿದ್ದು, ವಿಚಾರಣೆ ಒಳಪಡಿಸಲಾಗಿತ್ತು. ವಿಚಾರಣೆಯ ಬಳಿಕ ಆತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂದು ಕುಟುಂಬದವರು ತಿಳಿಸಿದ್ದಾರೆ.