ನವದೆಹಲಿ, ಅ. 23 (DaijiworldNews/MB) : ''ಬಿಹಾರಿಗಳಿಗೆ ಸುಳ್ಳು ಹೇಳಬೇಡಿ ಮೋದಿಯವರೇ, ನೀವು ಬಿಹಾರಿಗಳಿಗೆ ಉದ್ಯೋಗ ನೀಡಿದ್ದೀರಾ?'' ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಪ್ರಶ್ನಿಸಿದ್ದಾರೆ.
ಬಿಹಾರದ ನವಾಡಾ ಜಿಲ್ಲೆಯ ಹಿಸುವಾದಲ್ಲಿ ತೇಜಸ್ವಿ ಯಾದವ್ ಜತೆ 'ಬದಲಾವ್ ಸಂಕಲ್ಪ್' ರ್ಯಾಲಿಯಲ್ಲಿ ಮಾತನಾಡಿದ ರಾಹುಲ್, ''ಬಿಹಾರಿಗಳಿಗೆ ಸುಳ್ಳು ಹೇಳಬೇಡಿ ಮೋದಿಯವರೇ, ನೀವು ಬಿಹಾರಿಗಳಿಗೆ ಉದ್ಯೋಗ ನೀಡಿದ್ದೀರಾ?'' ಎಂದು ಪ್ರಶ್ನಿಸಿದ್ದು ''ಕಳೆದ ಚುನಾವಣೆಯಲ್ಲಿ ಪ್ರಧಾನಿ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದಿರಿ. ಆದರೆ ಯಾರಿಗೂ ಸಿಗಲಿಲ್ಲ'' ಎಂದು ಹೇಳಿದ್ದಾರೆ.
''ಗಡಿಯಲ್ಲಿ ಚೀನಾದ ಸೈನಿಕರು ನುಗ್ಗಿ 20 ಯೋಧರು ಹುತಾತ್ಮರಾದರೂ ಕೂಡಾ ಮೋದಿಯವರು ಮಾತ್ರ ಗಡಿಯೊಳಗೆ ಯಾರೂ ಬಂದಿಲ್ಲ ಎಂದು ನಮ್ಮ ಯೋಧರನ್ನು ಅವಮಾನಿಸಿದ್ದು ಯಾಕೆ? ಮೋದಿಯವರು ಈಗ ಸಾರ್ವಜನಿಕವಾಗಿ ನಾನು ಸೈನ್ಯ, ರೈತರು, ಕಾರ್ಮಿಕರು ಮತ್ತು ವ್ಯಾಪಾರಿಗಳಿಗೆ ತಲೆ ಬಾಗುತ್ತೇನೆ ಎಂದು ಹೇಳುತ್ತಾರೆ. ಆದರೆ ಒಮ್ಮೆ ಮೋದಿಯವರು ಮನೆಗೆ ವಾಪಾಸ್ ಹೋದ ಬಳಿಕಅಂಬಾನಿ ಮತ್ತು ಅದಾನಿಗಾಗಿ ಮಾತ್ರ ಕೆಲಸ ಮಾಡುತ್ತಾರೆ'' ಎಂದು ಆರೋಪಿಸಿದ್ದಾರೆ.
''ಕಪ್ಪು ಹಣದ ವಿರುದ್ದ ಹೋರಾಟ ಮಾಡುವುದಾಗಿ ಮೋದಿ ಹೇಳಿದರು. ಆದರೆ ಈಗ ಅದಾನಿ, ಅಂಬಾನಿ ಪರವಾಗಿದ್ದಾರೆ. ಶ್ರೀಮಂತರ ಪರವಾಗಿರುವ ಅವರು ರೈತರು ಹಾಗೂ ಸಣ್ಣ ಉದ್ಯಮಿಗಳನ್ನು ಕಡೆಗಣಿಸುತ್ತಾರೆ. ಅದಕ್ಕಾಗಿ ಮೂರು ರೈತ ವಿರೋಧಿ ಮಸೂದೆಯನ್ನು ತಂದಿದ್ದಾರೆ'' ಎಂದು ದೂರಿದರು.