ಮುಂಬೈ,ಅ. 23 (DaijiworldNews/HR): ಬಿಜೆಪಿಯ ಹಿರಿಯ ನಾಯಕ ಏಕನಾಥ್ ಖಡ್ಸೆ ಶುಕ್ರವಾರ ಅಧಿಕೃತವಾಗಿ ಎನ್ಸಿಪಿ ಪಕ್ಷಕ್ಕೆ ಸೇರಿದ್ದು, ಖಡ್ಸೆ ಎನ್ ಸಿಪಿ ಸೇರ್ಪಡೆಗೆ ಹಲವು ಬಿಜೆಪಿ ನಾಯಕರ ಆಕ್ರೋಶ ವ್ಯಕ್ತಪಡಿಸಿದ್ದು, ಖಡ್ಸೆ ಮೂಲ ಬಿಜೆಪಿ ಕಾರ್ಯಕರ್ತರಲ್ಲ ಎಂದು ತಮ್ಮ ಪಕ್ಷದ ಮಾಜಿ ಸಹೋದ್ಯೋಗಿ ಎಂದು ಕೇಂದ್ರ ಸಚಿವ ರಾವ್ ಸಾಹೇಬ್ ದನ್ವೆ ಟೀಕಿಸಿದ್ದಾರೆ.
ಎರಡು ದಿನಗಳ ಹಿಂದೆ ಸಾಹೇಬ್ ದನ್ವೆ ಅವರು, ರಾಜ್ಯದಲ್ಲಿ ಪಕ್ಷ ಸಂಘಟಿಸುವಲ್ಲಿ ಖಡ್ಸೆ ಅವರ ಕೊಡುಗೆ ಅತ್ಯಂತ ದೊಡ್ಡದು ಮತ್ತು ಅವರಿಗೆ ಪಕ್ಷದಲ್ಲಿ ಸುದೀರ್ಘ ಭವಿಷ್ಯ ಇದೆ ಎಂದು ಶ್ಲಾಘಿಸಿದ್ದರು. ಆದರೆ ಇಂದು ಖಡ್ಸೆ ಅವರು ಮೂಲ ಬಿಜೆಪಿಗರಲ್ಲ ಎಂದು ಹೇಳಿದ್ದಾರೆ.
2016 ರಲ್ಲಿ ಖಡ್ಸೆ ಅವರು ಭ್ರಷ್ಟಾಚಾರದ ಆರೋಪದಲ್ಲಿ ಅಂದಿನ ಬಿಜೆಪಿ ಸರ್ಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಪಕ್ಷದಲ್ಲಿ ಅವರನ್ನು ಕಡೆಗಣಿಸಲಾಗಿತ್ತು. ಇದರಿಂದ ನೊಂದು ಖಡ್ಸೆ ಅವರು ಎನ್ ಸಿಪಿ ಸೇರಿದ್ದಾರೆ ಎಂದು ವರದಿಯಾಗಿದೆ.