ಹಾವೇರಿ,ಅ. 23 (DaijiworldNews/HR): ರೈತ ವಿರೋಧಿ ಕೃಷಿ ಮಸೂದೆ, ಕೊರೊನಾ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ಹಾಗೂ ಮುಂತಾದ ಕಾರಣಗಳಿಂದ ಬೇಸರಗೊಂಡಿರುವ ಪ್ರಜ್ಞಾವಂತ ಮತದಾರರು, ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡುತ್ತಾರೆ ಎಂದು ಶಾಸಕ ಎಚ್.ಕೆ.ಪಾಟೀಲ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಮಸೂದೆಗಳ ತಿದ್ದುಪಡಿಯ ಸಂಧರ್ಭದಲ್ಲಿ ಧ್ವನಿ ಮತ ಕೇಳಿದಾಗ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಮತ ಹಾಕಲು ಅನುಮತಿ ಕೋರಿದವು. ಆದರೆ, ಇದನ್ನು ಬಿಜೆಪಿ ನಿರಾಕರಿಸುವ ಮೂಲಕ ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿದೆ ನತ್ತು ಸಂಸದೀಯ ವ್ಯವಸ್ಥೆಗೆ ಅಪಮಾನ ಮಾಡಿದೆ ಎಂದರು.
ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟ ಮಾತಿನಂತೆ, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ. ಅದರ ಬದಲು ಉದ್ಯೋಗ ನಷ್ಟವಾಗುವಂತೆ ಮಾಡಿದ್ದಾರೆ. ನೋಟು ಬ್ಯಾನ್ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ ಜನರಿಗೆ ಉಚಿತವಾಗಿ ಕೊರೊನಾ ಲಸಿಕೆ ಪೂರೈಸಲಾಗುವುದು ಎಂದು ಭರವಸೆ ನೀಡುವ ಮೂಲಕ ಬಿಜೆಪಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದರು.