ಲಖನೌ, ಅ. 24 (DaijiworldNews/MB) : ಹತ್ರಸ್, ಬಲ್ಲಿಯಾ ಪ್ರಕರಣದ ಆರೋಪಿಗಳ ಪರವಾಗಿ ನಿಂತಿರುವ ಕರ್ಣಿ ಸೇನಾ ಸಂಘಟನೆ ಈ ಎರಡು ಪ್ರಕರಣಗಳ ಆರೋಪಿಗಳನ್ನು ಸಮರ್ಥಿಸಿಕೊಂಡಿದೆ ಎಂದು ವರದಿಯಾಗಿದೆ.
ಬಲ್ಲಿಯಾ ಪಂಚಾಯ್ತಿ ಸಭೆಯಲ್ಲಿ ಗುಂಡಿನ ದಾಳಿ ನಡೆಸಿದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಆಪ್ತ, ಆರೋಪಿ ಧಿರೇಂದ್ರನನ್ನು ಈ ಹಿಂದೆ ಸುರೇಂದ್ರ ಸಿಂಗ್ ಸಮರ್ಥಿಸಿಕೊಳ್ಳುವ ಮೂಲಕ ವಿಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು. ಅಷ್ಟೇ ಅಲ್ಲದೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಶಾಸಕ ಸುರೇಂದ್ರ ಸಿಂಗ್ ಅವರು ಈ ಪ್ರಕರಣದ ತನಿಖೆಯಿಂದ ದೂರ ಉಳಿಯುವಂತೆ ಖಡಕ್ ಸೂಚನೆ ನೀಡಿದ್ದರು.
ಈಗ ಈ ಹತ್ರಸ್ ಹಾಗೂ ಬಲ್ಲಿಯಾ ಪ್ರಕರಣದ ಆರೋಪಿಗಳು ಠಾಕೂರ್ ಸಮುದಾಯಕ್ಕೆ ಸೇರಿದವರಾದ ಹಿನ್ನೆಲೆಯಲ್ಲಿ ಕರ್ಣಿ ಸೇನಾ ಆರೋಪಿಗಳ ಪರ ನಿಂತಿದೆ ಎಂದು ಹೇಳಲಾಗಿದೆ.
ಬಲ್ಲಿಯಾ ಆರೋಪಿಯನ್ನು ಭೇಟಿಯಾಗಲು ಕರ್ಣಿ ಸೇನಾದ ನಿಯೋಗವು ಹೋಗಿದ್ದು ಈ ಸಂದರ್ಭದಲ್ಲಿ ಪೊಲೀಸರು ತಡೆದಿದ್ದಾರೆ. ಇನ್ನು ಆರೋಪಿಯನ್ನು ಸಮರ್ಥಿಸಿಕೊಂಡಿರುವ ಕರ್ಣಿ ಸೇನಾದ ಹಿರಿಯ ಉಪಾಧ್ಯಕ್ಷ ದ್ರುವ್ ಕುಮಾರ್ ಸಿಂಗ್, ಧಿರೇಂದ್ರ ಅವರ 84 ವರ್ಷದ ತಂದೆಯೊಂದಿಗೆ ಮತ್ತೊಂದು ಗುಂಪು ಘರ್ಷಣೆಗೆ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಧಿರೇಂದ್ರ ಶೂಟೌಟ್ ಮಾಡಿದ್ದಾರೆ ಎಂದಿದ್ದಾರೆ.
ಇನ್ನು ಹತ್ರಸ್ ಆರೋಪಿಗಳ ಪರವಾಗಿಯು ನಿಂತಿರುವ ಕರ್ಣಿ ಸೇನಾ, ಆರೋಪಿ ಹಾಗೂ ಸಂತ್ರಸ್ತೆಯ ನಡುವೆ 104 ಕರೆ ಸಂಭಾಷಣೆ ನಡೆದಿದೆ. ಆದರೆ ಈಗ ಈ ಪ್ರಕರಣಕ್ಕೆ ಬೇರೆಯೇ ರೂಪ ನೀಡಲಾಗುತ್ತಿದೆ. ಘಟನೆ ಸಮಯದಲ್ಲಿ ಆರೋಪಿಗಳ ಮೊಬೈಲ್ ಲೊಕೇಷನ್ ಎಲ್ಲಿತ್ತು ಎಂದು ಸಿಬಿಐ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದೆ.