ಬೆಂಗಳೂರು, ಅ. 24 (DaijiworldNews/MB) : ಕೊರೊನಾ ಲಸಿಕೆ ಲಭ್ಯವಾದ ಬಳಿಕ ವೈದ್ಯರು, ದಾದಿಯರು ಮತ್ತು ಅರೆವೈದ್ಯರು ಸೇರಿದಂತೆ ಆರೋಗ್ಯ ಯೋಧರಿಗೆ ಮೊದಲು ಕೊರೊನಾ ಲಸಿಕೆ ನೀಡಲಾಗುವುದು ಎಂದು ಕರ್ನಾಟಕ ಆರೋಗ್ಯ ಸಚಿವ ಕೆ.ಸುಧಾಕರ್ ಶುಕ್ರವಾರ ಹೇಳಿದ್ದಾರೆ.
"ಕೊರೊನಾ ಲಸಿಕೆಯನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದಾಗ ವೈದ್ಯರು, ದಾದಿಯರು, ಅರೆವೈದ್ಯರು ಮತ್ತು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಸಹಾಯಕ ಸಿಬ್ಬಂದಿ ಸೇರಿದಂತೆ ಆರೋಗ್ಯ ಕಾರ್ಯಕರ್ತರು ಲಸಿಕೆಯ ಮೊದಲ ಫಲಾನುಭವಿಗಳಾಗುತ್ತಾರೆ" ಎಂದು ಸುಧಾಕರ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ತನ್ನ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅನುಮೋದನೆಯ ಬಳಿಕ ದೇಶಾದ್ಯಂತ ಲಸಿಕೆಯನ್ನು ಪರಿಚಯಿಸಲು ಕೇಂದ್ರ ಸರ್ಕಾರವು ಸಿದ್ಧತೆ ನಡೆಸಿದೆ.
"ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳು ಮತ್ತು ಆರೋಗ್ಯ ಕಾರ್ಯಕರ್ತರ ಡೇಟಾವನ್ನು ನಾವು ಸಂಗ್ರಹಿಸುತ್ತಿದ್ದೇವೆ. ಆರೋಗ್ಯ ಯೋಧರ ಬಳಿಕ ಹಿರಿಯ ನಾಗರಿಕರು ಮತ್ತು ಬೇರೆ ಅಸ್ವಸ್ಥತೆ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ" ಎಂದು ಸುಧಾಕರ್ ತಿಳಿಸಿದ್ದಾರೆ.