ಬೆಂಗಳೂರು, ಅ. 24 (DaijiworldNews/MB) : ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಚೇತರಿಕೆ ಕಾಣುವವರ ಪ್ರಮಾಣವು ಏರಿಕೆಯಾಗುತ್ತಿದ್ದು ಇತ್ತ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ರಾಜ್ಯದಲ್ಲಿ ಶುಕ್ರವಾರ 5,356 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು 8,749 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.
"ಶುಕ್ರವಾರ ರಾಜ್ಯದಾದ್ಯಂತ 8,749 ಮಂದಿ ಸೋಂಕಿತರು ಗುಣಮುಖರಾಗಿದ್ದು ಇಲ್ಲಿಯವರೆಗೆ 6,93,584 ಮಂದಿ ಚೇತರಿಸಿಕೊಂಡಿದ್ದಾರೆ. ಶುಕ್ರವಾರ 5,356 ಮಂದಿಗೆ ಕೊರೊನಾ ಪಾಸಿಟಿವ್ ಆಗಿದೆ. 89,483 ಸಕ್ರಿಯ ಪ್ರಕರಣಗಳು ಸೇರಿದಂತೆ ಒಟ್ಟು ಸೋಂಕಿತರ ಸಂಖ್ಯೆ 7,93,907 ಕ್ಕೆ ತಲುಪಿದೆ" ಎಂದು ರಾಜ್ಯ ಆರೋಗ್ಯ ಬುಲೆಟಿನ್ ತಿಳಿಸಿದೆ.
ಒಂದು ದಿನದಲ್ಲಿ 51 ಮಂದಿ ಸೋಂಕಿಗೆ ಬಲಿಯಾಗಿದ್ದು ರಾಜ್ಯಾದ್ಯಂತ ಸಾವಿನ ಸಂಖ್ಯೆ 10,821 ಕ್ಕೆ ಏರಿದೆ. ಬೆಂಗಳೂರು ಒಂದರಲ್ಲೇ 21 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲೇ ಅಧಿಕ ಕೊರೊನಾ ಪ್ರಕರಣಗಳು ಹಾಗೂ ಸಾವು ಸಂಭವಿಸಿದೆ.
"ಪಾಸಿಟಿವ್ ಪ್ರಮಾಣವು ಶೇ. 4.94 ಕ್ಕೆ ಇಳಿದಿದೆ ಮತ್ತು ಪ್ರಕರಣದ ಸಾವಿನ ಪ್ರಮಾಣವು ಒಂದೇ ದಿನದಲ್ಲಿ ರಾಜ್ಯದಾದ್ಯಂತ ಶೇ. 0.95 ಕ್ಕೆ ಇಳಿದಿದೆ" ಎಂದು ಬುಲೆಟಿನ್ನಲ್ಲಿ ಸೇರಿಸಲಾಗಿದೆ.