ಬೆಂಗಳೂರು, ಅ. 24 (DaijiworldNews/MB) : ''ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿರುವ ಪುಟ್ಟಣ್ಣ ಕುಟುಂಬದ 10–12 ಜನರಿಗೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ನೇಮಕಾತಿಯಲ್ಲಿ ಕ್ಲಾಸ್ ಒನ್ ಉದ್ಯೋಗ ಕೊಡಿಸಿದ್ದೆ ಎಂದು ನಾನು ಹೇಳಿಲ್ಲ'' ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ''ಕೇತಗಾನಹಳ್ಳಿ ತೋಟದ ಮನೆಯಲ್ಲಿ ಶಿಕ್ಷಕರೊಂದಿಗೆ ನಡೆದ ಸಭೆಯಲ್ಲಿ ನಾನು ಪುಟ್ಟಣ್ಣ ಕುಟುಂಬದ 10–12 ಜನಕ್ಕೆ ಕ್ಲಾಸ್ ಒನ್ ಹುದ್ದೆ ಕೊಡಿಸಿದ್ದೇನೆ. 1999-2000 ರಲ್ಲಿ ನನ್ನ ಅಧಿಕಾರ ಸಂದರ್ಭ ಉಪನ್ಯಾಸಕರ ನೇಮಕಾತಿಯಾಗಿತ್ತು. ಆಗ ಎಚ್.ಎನ್. ಕೃಷ್ಣ ಕೆಪಿಎಸ್ಸಿ ಅಧ್ಯಕ್ಷರಾಗಿದ್ದರು. ಆದರೆ ಪುಟ್ಟಣ್ಣ ಅವರಿವರ ಅರ್ಜಿ ಪಡೆದುಕೊಂಡು ಬಂದು ನೂರಾರು ಮಂದಿಗೆ ಉದ್ಯೋಗ ಕೊಡಿಸಿದ್ದಾರೆ ಎಂದು ಹೇಳಿದ್ದೇನೆಂದು ಪತ್ರಿಕೆಯೊಂದು ಪ್ರಕಟಿಸಿದೆ. ಆದರೆ ನಾನು ಆ ರೀತಿಯ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಅಷ್ಟಕ್ಕೂ ನಾನು 1999ರಲ್ಲಿ ಮುಖ್ಯಮಂತ್ರಿಯೇ ಆಗಿರಲಿಲ್ಲ. ಎಸ್. ಎಂ. ಕೃಷ್ಣ ಆಗ ಮುಖ್ಯಮಂತ್ರಿಗಳಾಗಿದ್ದರು. ಆ ಸಂದರ್ಭದಲ್ಲಿ ಎಚ್.ಎನ್. ಕೃಷ್ಣ ಕೆಪಿಎಸ್ಸಿ ಅಧ್ಯಕ್ಷರಾಗಿದ್ದರು. ಹೀಗಿರುವಾಗ ನಾನು ನೇಮಕಾತಿ ಮಾಡಿಸುವುದು ಹೇಗೆ'' ಎಂದು ಪ್ರಶ್ನಿಸಿದ್ದು, ''ನಾನು ನೀಡದ ಹೇಳಿಕೆಗಳು ಸುದ್ದಿಯಾಗುವುದರಿಂದ ಸಮಾಜಕ್ಕೆ ನನ್ನ ಬಗ್ಗೆ ತಪ್ಪು ಅಭಿಪ್ರಾಯ ಮೂಡುತ್ತದೆ'' ಎಂದು ಬೇಸರ ವ್ಯಕ್ತಪಡಿಸಿದರು.