ಜಮ್ಮು, ಅ. 24 (DaijiworldNews/MB) : ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ದೇಶದ್ರೋಹದ ಹೇಳಿಕೆ ನೀಡಿದ್ದು ಅವರ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಮಾಡಿದಾಗಿನಿಂದ ಗೃಹಬಂಧನದಲ್ಲಿದ್ದ ಅವರು ಇತ್ತೀಚೆಗೆ 14 ತಿಂಗಳ ಈ ಗೃಹ ಬಂಧನದಿಂದ ಬಿಡುಗಡೆಯಾಗಿದ್ದಾರೆ. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ್ದ ಅವರು, ನಾನು ರಾಜ್ಯದ ಧ್ವಜವನ್ನು ಮತ್ತೆ ಸ್ಥಾಪನೆ ಮಾಡಿದ ನಂತರವೇ ರಾಷ್ಟ್ರಧ್ವಜವನ್ನು ಹಿಡಿಯುತ್ತೇನೆ ಎಂದು ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿಯ ಜಮ್ಮು–ಕಾಶ್ಮೀರ ಘಟಕದ ಅಧ್ಯಕ್ಷ ರವೀಂದರ್ ರೈನಾ, ಪ್ರಪಂಚದ ಯಾವ ಶಕ್ತಿಯಿಂದಲ್ಲೂ ರಾಜ್ಯದ ಧ್ವಜ ಸ್ಥಾಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು ಮೆಹಬೂಬಾ ಅವರು ದೇಶ ದ್ರೋಹದ ಹೇಳಿಕೆ ನೀಡಿದ್ದಾರೆ. ಅವರನ್ನು ಕೂಡಲೇ ಬಂಧಿಸಬೇಕು. ಅವರ ವಿರುದ್ದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕ್ರಮಕೈಗೊಳ್ಳಬೇಕು. ಈ ದೇಶದಲ್ಲಿ ಒಂದೇ ಧ್ವಜ, ಒಂದೇ ಧ್ವಜಾಹೋಹಣ. ರಾಷ್ಟ್ರಕ್ಕಾಗಿ ನಾವು ನಮ್ಮ ಪ್ರತಿ ಹನಿ ರಕ್ತವನ್ನೂ ತ್ಯಾಗ ಮಾಡಲಿದ್ದೇವೆ ಎಂದು ಒತ್ತಾಯಿಸಿದ್ದಾರೆ.