ಬೆಳಗಾವಿ, ಅ. 24 (DaijiworldNews/MB) : ಕೊರೊನಾ ಲಸಿಕೆ ಲಭ್ಯವಾದ ಬಳಿಕ, ರಾಜ್ಯದಲ್ಲೂ ಜನರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಶನಿವಾರ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಪ್ರಸ್ತುತ ಜನರಿಗೆ ಎಲ್ಲಾ ವೈದ್ಯಕೀಯ ಸೌಲಭ್ಯಗಳನ್ನು ಸರ್ಕಾರದಿಂದಲೇ ಉಚಿತವಾಗಿ ನೀಡಲಾಗುತ್ತಿದ್ದು ಲಸಿಕೆ ನೀಡಲು ಕೂಡಾ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಘೋಷಿಸಲಿದ್ದಾರೆ. ಬಿಹಾರದಲ್ಲಿ ಜನರಿಗೆ ಲಸಿಕೆ ನೀಡುವ ಭರವಸೆ ನೀಡಿದ್ದೇವೆ. ಅದರಲ್ಲಿ ಯಾವುದೇ ತಪ್ಪೇನಿಲ್ಲ. ಲಸಿಕೆ ಕೊಡಲ್ಲ ಎಂದರೆ ಅದನ್ನು ಅವರು ಪ್ರಶ್ನಿಸುವುದಿಲ್ಲವೇ? ನಾವು ಕೂಡಾ ಇಲ್ಲಿ ಉಚಿತ ಲಸಿಕೆ ನೀಡುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿ ಘೋಷಣೆ ಮಾಡುತ್ತಾರೆ'' ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಮೇಲೆ ವಾಗ್ದಾಳಿ ನಡೆಸಿದ ಅವರು, ''ವಿಪಕ್ಷದವರು ಎಲ್ಲದಕ್ಕೂ ವಿರೋಧ, ಟೀಕೆ ಮಾಡುತ್ತಿದ್ದಾರೆ. ಅವರು ಕೂಡಾ ಜನರೊಂದಿಗೆ ನಿಲ್ಲಬೇಕು. ಸಿದ್ದರಾಮಯ್ಯ ಅಧಿಕಾರ ಇದ್ದಾಗ ಜನರಿಗೆ ಸಹಾಯ ಮಾಡಿಲ್ಲ ಈಗಲೂ ಮಾಡುತ್ತಿಲ್ಲ. ಅವರದ್ದು ಬರೀ ರಾಜಕೀಯ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಾವು ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದ್ದೇವೆ. ಸಿದ್ದರಾಮಯ್ಯ ಅವರು ಯಾವುದೇ ಸಂವೇದನೆ ಇಲ್ಲದೆಯೇ ಹೇಳಿಕೆ ನೀಡುತ್ತಿದ್ದಾರೆ. ಅವರು ನಿಜವಾಗಿ ಈ ನಿರ್ಧಾರವನ್ನು ಸ್ವಾಗತಿಸಬೇಕಿತ್ತು. ಆದರೆ ಅವರು ಎಲ್ಲವನ್ನು ವಿರೋಧ ಮಾಡುವ ಭರದಲ್ಲಿದ್ದಾರೆ'' ಎಂದು ದೂರಿದರು.
ಇನ್ನು ಈ ಸಂದರ್ಭದಲ್ಲೇ ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಹಾನಿಯ ಬಗ್ಗೆ ಮಾತನಾಡಿದ ಅವರು, ''ಬೆಂಗಳೂರು ಸೇರಿದಂತೆ ಹಲವೆಡೆ ಕಟ್ಟಡಗಳು ನಿರ್ಮಾಣವಾಗುತ್ತಲ್ಲಿರುತ್ತದೆ. ಇದರಿಂದಾಗಿ ಮಳೆ ನೀರು ನಿಂತು ಪ್ರವಾಹ ಉಂಟಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜನರಿಗೆ ಕೂಡಲೇ ಪರಿಹಾರ ನೀಡುವ ಬಗ್ಗೆ ಕ್ರಮ ವಹಿಸಲಾಗಿದೆ'' ಎಂದು ತಿಳಿಸಿದ್ದಾರೆ.