ಪಾಟ್ನಾ, ಅ.24 (DaijiworldNews/PY): ರಾಷ್ಟ್ರೀಯ ಜನತಾ ದಳ ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಆರ್ಜೆಡಿಯ ಪ್ರಣಾಳಿಕೆಯು ಹಮಾರಾ ಪ್ರಾಣ್ ಎನ್ನುವ ಶೀರ್ಷಿಕೆಯಡಿಯಲ್ಲಿ ಬಿಡುಗಡೆಗೊಂಡಿದ್ದು, ಇದರಲ್ಲಿ ಉದ್ಯೋಗ ಸೇರಿದಂತೆ ಉನ್ನತ ಶಿಕ್ಷಣ, ಕೈಗಾರಿಕೆಗಳು, ಕೃಷಿ ಕ್ಷೇತ್ರ, ಸ್ಮಾರ್ಟ್ ಹಳ್ಳಿಗಳು, ಸ್ವ-ಸಹಾಯ ಗುಂಪುಗಳು ಹಾಗೂ 17 ವಿಚಾರಗಳ ಬಗ್ಗೆ ತಿಳಿಸಲಾಗಿದೆ. ಈ ಪ್ರಣಾಣಿಕೆಯು 16 ಪುಟಗಳನ್ನು ಹೊಂದಿದ್ದು, ಹತ್ತು ಲಕ್ಷ ಮಂದಿಗೆ ಉದ್ಯೋಗ ನೀಡುವ ಭರವಸೆ ನೀಡಿದೆ.
ಈ ಬಗ್ಗೆ ಹೇಳಿಕೊಂಡಿರುವ ಆರ್ಜೆಡಿ, ಪ್ರತಿಯೊಂದು ಜಿಲ್ಲೆಯಲ್ಲಿ ನಮ್ಮ ಸರ್ಕಾರವು ಉದ್ಯೋಗ ಕೇಂದ್ರಗಳನ್ನು ಸ್ಥಾಪನೆ ಮಾಡಲಿದೆ. ಅಲ್ಲದೇ, ರಾಜ್ಯದಲ್ಲಿನ ಕೈಗಾರಿಕೆಗಳನ್ನು ಕೂಡಾ ಅಭಿವೃದ್ದಿಪಡಿಸಲಾಗುವುದು. ಉದ್ಯೋಗಕ್ಕೆ ಅರ್ಜಿ ಇಚ್ಛಿಸುವ ಬಿಹಾರದ ಯುವಕರಿಗೆ ಅರ್ಜಿ ಶುಲ್ಕವನ್ನು ಮನ್ನಾ ಮಾಡಲಾಗುವುದು. ಇದರೊಂದಿಗೆ ಮನೆಯಿಂದ ಬಂದು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರಯಾಣ ದರವನ್ನು ಒದಗಿಸಲಾಗುವುದು ಎನ್ನುವ ಭರವಸೆ ನೀಡಿದೆ.
ಇನ್ನು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದು ಲಕ್ಷಕ್ಕೂ ಅಧಿಕ ನೇರ ಹಾಗೂ ಪರೋಕ್ಷ ಉದ್ಯೋಗಗಳನ್ನು ಸೃಷ್ಠಿ ಮಾಡಲಾಗುವುದು. ಇದರೊಂದಿಗೆ ಗ್ರಾಮೀಣ ವೈದ್ಯರ ಬೇಡಿಕೆಯನ್ನು ಪೂರ್ಣಗೊಳಿಸುವ ಸಲುವಾಗಿ ಯೋಜನೆಗಳನ್ನು ರೂಪಿಸಲಾಗುವುದು ಎಂದು ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಹೇಳಿದ್ದಾರೆ.