ನವದೆಹಲಿ, ಅ. 24 (DaijiworldNews/MB) : ''ಪಂಜಾಬ್ನಲ್ಲಿ ಬಿಹಾರ ಮೂಲದ ವಲಸೆ ಕಾರ್ಮಿಕ ಕುಟುಂಬದ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ. ಹತ್ರಸ್ ಪ್ರಕರಣದ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸಂತ್ರಸ್ತೆಯ ಕಟುಂಬವನ್ನು ಯಾಕೆ ಭೇಟಿಯಾಗಿಲ್ಲ'' ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಪ್ರಶ್ನಿಸಿದ್ದಾರೆ.
''ಬಿಜೆಪಿ ಮುಖಂಡರು ಸಂತ್ರಸ್ತೆಯ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಆದರೆ ಹತ್ರಸ್ಗೆ ಹೋದ ಕಾಂಗ್ರೆಸ್ ನಾಯಕರು ಈ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಹೋಗಿಲ್ಲ. ಹತ್ರಸ್ ಭೇಟಿ ಬರೀ ರಾಜಕೀಯ ಪ್ರವಾಸ. ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯದಲ್ಲಿ ಮಹಿಳೆಯರ ಮೇಲೆ ಅನ್ಯಾಯ, ಅತ್ಯಾಚಾರವಾದಾಗ ಕಾಂಗ್ರೆಸ್ ಮುಖಂಡರು ಎಲ್ಲಿಯೂ ಕಾಣ ಸಿಗುವುದಿಲ್ಲ'' ಎಂದು ಟೀಕೆ ಮಾಡಿದ್ದಾರೆ.
ಆರ್ಜೆಡಿ ನಾಯಕ ತೇಜಸ್ವಿ ವಿರುದ್ದ ವಾಗ್ದಾಳಿ ನಡೆಸಿ ಅವರು, ''ತೇಜಸ್ವಿ ಅವರು ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಅತ್ಯಾಚಾರವಾದಾಗ ಸುಮ್ಮನಿದ್ದಾರೆ. ಅವರ ರಾಜ್ಯದ ಓರ್ವ ಹೆಣ್ಣು ಮಗಳ ಮೇಲೆ ಅತ್ಯಾಚಾರವಾದರೂ ಅವರು ಮೌನ ಮುರಿಯುವುದಿಲ್ಲ'' ಎಂದು ದೂರಿದ್ದಾರೆ.
ಪಂಜಾಬ್ನ ಜಲಾಲ್ಪುರ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಹತ್ಯೆಗೈದು ಬಳಿಕ ಬೆಂಕಿ ಹಚ್ಚಿದ್ದು, ಅರೆ ಬೆಂದ ಬಾಲಕಿಯ ದೇಹ ಪತ್ತೆಯಾಗಿದೆ ಎಂಬುದಾಗಿ ಪೊಲೀಸರು ಗುರುವಾರ ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಪ್ರೀತ್ ಸಿಂಗ್ ಹಾಗೂ ಆತನ ಅಜ್ಜ ಸುರ್ಜೀತ್ ಸಿಂಗ್ನನ್ನು ಬಂಧಿಸಲಾಗಿದೆ. ಈ ಘಟನೆ ಬಗ್ಗೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಇದೊಂದು ಆಘಾತಕಾರಿ ಘಟನೆಯಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರೂ ಕೂಡ ತಕ್ಷಣ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ ಬಾಲಕಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಡಿಜಿಪಿಯವರಿಗೆ ಆದೇಶ ನೀಡಿದ್ದೇನೆ'' ಎಂದು ತಿಳಿಸಿದ್ದರು.