ಬೆಂಗಳೂರು, ಅ. 24 (DaijiworldNews/MB) : ''ಮೊದಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಬಳಿಕ ಮುಖ್ಯಮಂತ್ರಿ ಯಾರಾಗಬೇಕು ಎಂದು ಹೈಕಮಾಂಡ್ ಮತ್ತು ಶಾಸಕರು ತೀರ್ಮಾನಿಸುತ್ತಾರೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ನಲ್ಲಿ ಈಗ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ನಡೆಯುತ್ತಿದೆ. ಒಕ್ಕಲಿಗ ಸಮುದಾಯದಿಂದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಗಳಾಗುತ್ತಾರೆ ಎಂದು ರಾಜ್ಯಸಭಾ ಕಾಂಗ್ರೆಸ್ ಸದಸ್ಯ ಜಿ.ಸಿ.ಚಂದ್ರಶೇಖರ್ ಹೇಳಿದ್ದರೆ ಇದಕ್ಕೂ ಮುನ್ನ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಬೇಕು ಎಂದು ಹೇಳಿದ್ದರು.
ಇದೀಗ ಈ ಎಲ್ಲಾ ಬೆಳವಣಿಗೆಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, ''ಮೊದಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಬಳಿಕ ಮುಖ್ಯಮಂತ್ರಿ ಯಾರಾಗಬೇಕು ಎಂದು ಹೈಕಮಾಂಡ್ ಮತ್ತು ಶಾಸಕರು ತೀರ್ಮಾನಿಸುತ್ತಾರೆ. ನಮ್ಮ ಮೇಲೆ ಇರುವ ಪ್ರೀತಿಯಿಂದಾಗಿ ಕೆಲವು ನಾಯಕರು ನಾವು ಮುಖ್ಯಮಂತ್ರಿಯಾಗುತ್ತೇವೆ ಎಂದು ಹೇಳುತ್ತಾರೆ. ಅವರವರ ಆಸೆಗಳನ್ನು ಅವರು ವ್ಯಕ್ತಪಡಿಸುತ್ತಾರೆ ಅದಕ್ಕೆ ನಾನು ಜವಾಬ್ದಾರಿಯಲ್ಲ'' ಎಂದು ಹೇಳಿದ್ದಾರೆ.
''ಜನರು ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿದ ಬಳಿಕ ನಾಯಕರು, ಶಾಸಕರು ಯಾವ ತೀರ್ಮಾನ ಮಾಡುತ್ತಾರೋ ಅದಕ್ಕೆ ನಾನು ಬದ್ದನಾಗಿರುವೆ ಎಂದು ಈಗಲೇ ತಿಳಿಸಬಯಸುತ್ತೇನೆ. ಜಮೀರ್ ಅಹ್ಮದ್ ಅವರು ನಮಗೂ ಸ್ನೇಹಿತರೇ, ಅವರು ಭಾವುಕರಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ. ಅದಕ್ಕೆ ಬೇರೆ ಅರ್ಥ ಕಂಡುಕೊಳ್ಳುವ ಯತ್ನ ಬೇಡ'' ಎಂದು ಹೇಳಿದ್ದಾರೆ.