ಹುಬ್ಬಳ್ಳಿ, ಅ.24 (DaijiworldNews/PY): ಬಡವರ ಬದುಕಿಗೆ ಅಕ್ಕಿ ಎಷ್ಟು ಮುಖ್ಯವೋ, ಹಾಗೆಯೇ ಕೊರೊನಾ ಲಸಿಕೆ ಕೂಡಾ ಅಷ್ಟೇ ಮುಖ್ಯ. ಈ ವಿಚಾರದಲ್ಲಿ ರಾಜಕೀಯದ ಅವಶ್ಯಕತೆ ಇಲ್ಲ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಮಾತನಾಡಿದ ಅವರು, ಲಸಿಕೆಯ ವಿಚಾರದಲ್ಲಿ ರಾಜಕೀಯ ಮಾತನಾಡುವುದು ಸರಿಯಲ್ಲ. ಜನರಿಗೆ ಅಕ್ಕಿ ಉಚಿತವಾಗಿ ನೀಡತ್ತೇವೆ ಎಂದಾಗ ಯಾರೂ ತಕರಾರು ಮಾಡಲಿಲ್ಲ. ಇದೀಗ ಕೊರೊನಾ ಲಸಿಕೆ ಉಚಿತವಾಗಿ ನೀಡುತ್ತೇವೆ ಎಂದಾಗ ಈ ಬಗ್ಗೆ ರಾಜಕೀಯ ಮಾತನಾಡುತ್ತಾರೆ. ಈ ಬಗ್ಗೆ ಏಕೆ ರಾಜಕೀಯ ಮಾತನಾಡುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಬಿಹಾರದಲ್ಲಿ ಚುನಾವಣೆ ಇರುವ ಹಿನ್ನೆಲೆ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡುತ್ತೇವ ಎಂದು ಹೇಳಿದ್ದೇವೆ. ಆದರೆ, ಈ ವಿಚಾರವನ್ನು ಬೇರ ಪಕ್ಷದವರು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಎಲ್ಲರಿಗೂ ಕೂಡಾ ಲಸಿಕೆ ಉಚಿತವಾಗಿ ನೀಡಿ ಎಂದು ವಿರೋಧ ಪಕ್ಷಗಳು ಆಗ್ರಹ ಮಾಡಿದ್ದರೆ ಅರ್ಥವಿರುತ್ತಿತ್ತು. ಆದರೆ, ಕಾರಣವಿಲ್ಲದೇ ವಿರೋಧಪಕ್ಷಗಳು ಟೀಕೆ ಮಾಡುತ್ತಿರುವುದಕ್ಕೆ ಅರ್ಥವಿಲ್ಲ ಎಂದಿದ್ದಾರೆ.