ದಾವಣಗೆರೆ, ಅ. 24 (DaijiworldNews/HR): ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪಚುನಾವಣೆ ಸೋಲು ಗೆಲುವು ಮುಂದಿನ ಚುನಾವಣೆಗೆ ದಿಕ್ಸೂಚಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದು, ನಾನು ಈ ಸವಾಲು ಸ್ವೀಕರಿಸಲು ಸಿದ್ಧ ಎಂಬುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಡೆದ ಲೊಕಸಭೆ ಚುನಾವಣೆ ಸಂದರ್ಭದಲ್ಲಿಯೂ ಸಿದ್ದರಾಮಯ್ಯ ಅದು ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದು ಹೇಳಿದ್ದರು, ಆಗ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿತ್ತು. ಸಮ್ಮಿಶ್ರ ಸರ್ಕಾರ ಪತನವಾಗಿ 12 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯವರು ಯಾರೂ ಗೆಲ್ಲುವುದಿಲ್ಲ ಎಂದಿದ್ದರು. ಇದೀಗ ಉಪಚುನಾವಣೆ, ಪರಿಷತ್ ಚುನಾವಣೆ ಮುಂದಿನ ಚುನಾವಣೆ ದಿಕ್ಸೂಚಿ ಎನ್ನುತ್ತಿದ್ದು ನಾನು ಸಿದ್ದರಾಮಯ್ಯ ಅವರ ಸವಾಲು ಸ್ವೀಕರಿಸಲು ಸಿದ್ಧ ಎಂದು ಹೇಳಿದ್ದಾರೆ.
ಇನ್ನು ಸಿದ್ದರಾಮ್ಯನವರು ಇರುವುದೇ ಟೀಕೆ ಮಾಡುವುದಕ್ಕಾಗಿ, ಹಾಗಾಗಿ ಅವರ ಎಲ್ಲ ಟೀಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ಸಿದ್ದರಾಮಯ್ಯ ಅವರು ಇನ್ನು ಮುಂದೆಯಾದರೂ ದಯಮಾಡಿ ಎಲ್ಲವುದಕ್ಕೂ ಟೀಕೆ ಮಾಡುವುದನ್ನು ನಿಲ್ಲಿಸಲು ಮನವಿ ಮಾಡುವುದಾಗಿ ಹೇಳಿದ್ದಾರೆ.