ಕಾರವಾರ, ಅ.24 (DaijiworldNews/PY): ಬಿಜೆಪಿಯು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಧಿಕ್ಕರಿಸಿ, ಸಂಸದೀಯ ಸಂಸ್ಕೃತಿಗೆ ಅಗೌರವ ತೋರಿಸಿ ಆಡಳಿತ ನಡೆಸುತ್ತಿದೆ ಎಂದು ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ್ ಹೇಳಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ನಡೆಯುತ್ತಿದ್ದು, ಈ ವಿಚಾರಗಳನ್ನು ಮತದಾರರು ಗಂಭೀರವಾಗಿ ಪರಿಗಣಿಸಬೇಕು ಎಂದರು.
ರೈತ ವಿರೋಧಿಯಾದ ಮೂರು ಕಾಯ್ದೆಗಳನ್ನು ಮತಕ್ಕೆ ಹಾಕಲು ಕಾಂಗ್ರೆಸ್ ಸೇರಿದಂತೆ ಡಿಎಂಕೆ ಹಾಗೂ ಕೆಲವು ಪಕ್ಷೇತರ ಸಂಸದರು ಒತ್ತಾಯ ಮಾಡಿದ್ದರು. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಲಿಲ್ಲ. ಈ ಮುಖೇನ ಸಂಸದೀಯ ಮೌಲ್ಯಗಳಿಗೆ ಅವಮಾನ ಮಾಡಿದೆ ಎಂದು ಆರೋಪಿಸಿದರು.
ಕೊರೊನಾ ಲಸಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಗರು ದೇಶದಲ್ಲಿನ ಕೊರೊನಾಕ್ಕೆ ಲಸಿಕೆ ನೀಡುವ ವಿಚಾರವನ್ನು ರಾಜಕೀಯ ವಿಚಾರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಲಸಿಕೆಯು ಪ್ರತಿಯೋರ್ವ ನಾಗರಿಕನ ಹಕ್ಕು ಎಂದರು.
ಹತ್ರಾಸ್ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಯುಪಿಯ ಹತ್ರಾಸ್ ಪ್ರಕರಣದ ವಿರುದ್ದ ನಡೆದ ಪ್ರತಿಭಟನೆಯನ್ನು ಉತ್ತರಪ್ರದೇಶದ ಬಿಜೆಪಿ ಸರ್ಕಾರ ಹತ್ತಿಕ್ಕಿದೆ. ಅಲ್ಲದೇ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರನ್ನು ಸಂತ್ರಸ್ತರ ಮನೆಗೆ ಹೋಗಲು ಅವಕಾಶ ಕಲ್ಪಿಸಲಿಲ್ಲ. ಈ ರೀತಿಯಾಗಿ ಹಿಂದೆ ಆಡಳಿತದಲ್ಲಿದ್ದ ಸರ್ಕಾರ ಮಾಡಿಲ್ಲ ಎಂದು ತಿಳಿಸಿದರು.