ಬೆಂಗಳೂರು, ಅ.24 (DaijiworldNews/PY): ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿ ದೀಪಾವಳಿಯನ್ನಾಗಿ ಆಚರಿಸುವ ಸಲುವಾಗಿ ಈ ಬಾರಿಯ ದೀಪಾವಳಿಯನ್ನು ಗೋಮಯ ದೀಪಾವಳಿಯನ್ನಾಗಿ ಆಚರಿಸಲು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.
ಈ ಬಾರಿಯ ದೀಪಾವಳಿಯ ಸಂದರ್ಭ ಅಪಾಯಕಾರಿ ಪಟಾಕಿಗಳ ಬಳಕೆ ಬಿಟ್ಟು, ಹಾನಿಕಾರವಲ್ಲದ ಗೋಮಯ ದೀಪಗಳನ್ನು ಬಳಸುವಂತೆ ತಿಳಿಸಿದ್ದಾರೆ.
ಗೋಮಯ ದೀಪಗಳ ಬಳಕೆಯಿಂದ ಭಾರತೀಯ ದೇಶೀಯ ಗೋತಳಿ ಉಳಿವಿಗಾಗಿ ಪ್ರಯತ್ನ ಮಾಡುವುದರ ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಇದು ಉತ್ತಮ. ಅಲ್ಲದೇ, ದೇಶೀಯ ದೀಪಗಳಿಗೂ ಕೂಡಾ ಪ್ರೋತ್ಸಾಹ ದೊರಕುತ್ತದೆ ಎಂದಿದ್ದಾರೆ.
ಈ ಬಾರಿಯ ದೀಪಾವಳಿಯಂದು ಕೇಂದ್ರ ಪಶುಸಂಗೋಪನಾ ಸಚಿವಾಲಯದ ರಾಷ್ಟ್ರೀಯ ಕಾಮಧೇನು ಆಯೋಗದಿಂದ ಪ್ರಾಯೋಜಿತವಾದ ಸೆಗಣಿಯಿಂದ ತಯಾರಿಸ್ಪಟ್ಟ ಗೋಮಯ ಹಣತೆಯನ್ನು ಉರಿಸುವ ಯೋಜನೆಯನ್ನು ರೂಪಿಸಿದ್ದು, ದೇಶದಲ್ಲಿ 33 ಕೋಟಿ ದೀಪಗಳನ್ನು ಹಾಗೂ ರಾಜ್ಯದಲ್ಲಿ 3 ಕೋಟಿ ಗೋಮಯ ದೀಪಗಳನ್ನು ಬಳಸುವ ಉದ್ದೇಶವನ್ನು ಹೊಂದಿದೆ.