ನವದೆಹಲಿ, ಅ.25 (DaijiworldNews/PY): ಸಿಕ್ಕಿಂ ಸೆಕ್ಟರ್ನ ನೈಜ ನಿಯಂತ್ರಣ ಪ್ರದೇಶಕ್ಕೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಯುದ್ದದ ಸನ್ನದ್ಧತೆಯನ್ನು ಪರಿಶೀಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶನಿವಾರ ಸಂಜೆ ಡಾರ್ಜಿಲಿಂಗ್ನ ಸುಕ್ನಾದಲ್ಲಿರುವ ತ್ರಿಶಕ್ತಿ ಕಾರ್ಪ್ಸ್ ಎಂದೇ ಜನಪ್ರಿಯವಾಗಿರುವ ಪ್ರಮುಖ ಮಿಲಿಟರಿ ರಾಜನಾಥ್ ಸಿಂಗ್ ಅವರು ಆಗಮಿಸಿದ್ದು, ಯೋಧರೊಂದಿಗೆ ದಸರಾ ಹಬ್ಬ ಆಚರಣೆ ಹಾಗೂ ಯುದ್ದದ ಸನ್ನದ್ಧತೆಯ ಬಗ್ಗೆ ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ಎರಡು ದಿನಗಳ ಕಾಲ ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂ ಭೇಟಿಯನ್ನು ಆಯೋಜಿಸಿದ್ದಾರೆ.
ರಾಜನಾಥ್ ಸಿಂಗ್ ಅವರೊಂದಿಗೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರಾವಣೆ ಇದ್ದಾರೆ.
ಭಾರತೀಯ ಸೇನೆಯು ಯೋಧರ ಹಾಗೂ ಶಸ್ತ್ರಾಸ್ತ್ರಗಳ ನಿಯೋಜನೆಯನ್ನು ಸಿಕ್ಕಿಂ, ಅರಣಾಚಲ ಪ್ರದೇಶ ಸೆಕ್ಟರ್ ಸೇರಿದಂತೆ ಸುಮಾರು 3,500 ಕಿ.ಮೀ ಉದ್ದದ ಎಲ್ಎಸಿಯ ಉದ್ದಕ್ಕೂ ಹೆಚ್ಚಿಸಲಾಗಿದೆ.
ಸಿಕ್ಕಿಂ ಸೆಕ್ಟರ್ನಲ್ಲಿ ಎಲ್ಎಸಿ ಉದ್ದಕ್ಕೂ ಇರುವ ಪರಿಸ್ಥಿತಿ, ಸೈನ್ಯ ಹಾಗೂ ಶಸ್ತ್ರಾಸ್ತ್ರಗಳನ್ನು ನಿಯೋಜಿಸುವ ಬಗ್ಗೆ ಸೇನೆಯ ಉನ್ನತ ಕಮಾಂಡರ್ಗಳು ರಕ್ಷಣಾ ಸಚಿವ ಹಾಗೂ ಜನರಲ್ನರವಾಣೆ ಅವರಿಗೆ ವಿವರವಾದ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇನಾ ಸಿಬ್ಬಂದಿಯೊಂದಿಗಿನ ಸಂವಾದಲ್ಲಿ ಮಾತನಾಡಿದ ರಕ್ಷಣಾ ಸಚಿವರು, ಸೈನಿಕರಿಗೆ ವಿಜಯದಶಮಿಯ ಶುಭಾಶಯಗಳನ್ನು ತಿಳಿಸಿದ್ದು, ರಾಷ್ಟ್ರದ ಗಡಿಗಳನ್ನು ಭದ್ರಪಡಿಸುವಲ್ಲಿ ಅವರ ಸಮರ್ಪಣೆಯನ್ನು ಶ್ಲಾಘಿಸಿದ್ದಾರೆ.
ನಿಮ್ಮಂತಹ ಧೈರ್ಯಶಾಲಿ ಸೈನಿಕರಿಂದಾಗಿ ದೇಶದ ಗಡಿಗಳು ಭದ್ರವಾಗಿವೆ. ನಿಮ್ಮ ಬಗ್ಗೆ ಇಡೀ ದೇಶವೇ ಹೆಮ್ಮೆಪಡುತ್ತದೆ ಎಂದು ಹೇಳಿದ್ದಾರೆ.
ತ್ರಿಶಕ್ತಿ ಕಾರ್ಪ್ಸ್ ಒಂದು ದೊಡ್ಡ ಸುವರ್ಣವಾದ ಇತಿಹಾಸವನ್ನು ಹೊಂದಿದೆ. ವಿಶೇಷವಾಗಿ 1962, 1967, 1971 ಮತ್ತು 1975 ರಲ್ಲಿ ಈ ಕಾರ್ಪ್ಸ್ ಶೌರ್ಯದ ಉದಾಹರಣೆಗಳನ್ನು ಪ್ರದರ್ಶಿಸಿದೆ ಎಂದು ತಿಳಿಸಿದ್ದಾರೆ.