ನವದೆಹಲಿ, ಅ.25 (DaijiworldNews/PY):ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪಂಜಾಬ್ನಲ್ಲಿ ಬಿಹಾರದ ದಲಿತ ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಘಟನೆಯ ಬಗ್ಗೆ ಅಣ್ಣ-ತಂಗಿ ಮೌನವಹಿಸಿದ್ದು ಏಕೆ? ಎಂದು ಕೇಳಿದ್ದಾರೆ.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೋಶಿಯಾರ್ಪುರದಲ್ಲಿನ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಪೂರ್ಣ ಮೌನವಹಿಸಿದೆ. ಈ ನಾಯಕರು ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ನಡೆಯುವ ಯಾವುದೇ ಘಟನೆಯ ವಿಚಾರವಾಗಿ ಧ್ವನಿ ಎತ್ತುವುದಿಲ್ಲ ಎಂದಿದ್ದಾರೆ.
ಬಿಜೆಪಿಯು ಬಾಲಿಕಯ ಕುಟುಂಬಕ್ಕೆ ನ್ಯಾಯ ಒದಗಿಸಲು ಬೆಂಬಲವಾಗಿ ನಿಲ್ಲಲಿದೆ. ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಸಹೋದರನ ವಿರುದ್ದವೂ ಕೂಡಾ ಅತ್ಯಾಚಾರ ಪ್ರಕರಣಗಳಿವೆ. ಆ ಕಾರಣದಿಂದ ಅವರು ಈ ಘಟನೆಯ ಬಗ್ಗೆ ಮಾತನಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಣಾಳಿಕೆಯಲ್ಲಿ ಉಚಿತ ಲಸಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಯಾವುದೇ ಪರಿಶೀಲನೆಯ ಅಗತ್ಯವಿಲ್ಲ. ಅಧಿಕಾರಕ್ಕೆ ಬಂದರೆ ನಾನು ಏನು ಮಾಡುತ್ತೇವೆ ಎನ್ನುವುದನ್ನು ಪಕ್ಷದ ಪ್ರಣಾಳಿಕೆಯಲ್ಲಿ ಹೇಳುವಂತ ಹಕ್ಕನ್ನು ಬಿಜೆಪಿ ಹೊಂದಿದೆ ಎಂದು ತಿಳಿಸಿದ್ದಾರೆ.