ಬೆಂಗಳೂರು, ಅ.25 (DaijiworldNews/PY): ನವರಾತ್ರಿಯ ಹಿನ್ನೆಲೆ ನಾಡಿನ ಜನತೆಗೆ ಹಲವು ಗಣ್ಯರು ಭಾನುವಾರ ಶುಭ ಕೋರಿದ್ದಾರೆ.
ಪ್ರಧಾನಿ ಮೋದಿ ಅವರು ಟ್ವೀಟ್ ಮೂಲಕ ಶುಭ ಕೋರಿದ್ದು, ದೇಶದ ಜನತೆಗೆ ಮಹಾನವಮಿಯ ಶುಭಾಶಯಗಳು. ನವರಾತ್ರಿಯಲ್ಲಿ ದುರ್ಗೆಯ ಒಂಭತ್ತನೇ ರೂಪವಾಗಿರುವ ಸಿದ್ದಿಧಾತ್ರಿಯನ್ನು ಪೂಜಿಸಲಾಗುತ್ತದೆ. ಮಾತೆ ಸಿದ್ದಿಧಾತ್ರಿಯ ಆಶೀರ್ವಾದದಿಂದ ಎಲ್ಲರಿಗೂ ಅವರ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿ ಎಂದು ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಟ್ವೀಟ್ ಮೂಲಕ ಶುಭಕೋರಿದ್ದು, ಸಿದ್ಧಗಂಧರ್ವ ಯಕ್ಷದೈರಸುರೈರಮರೈರಪಿ| ಸೇವ್ಯಮಾನಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನಿ||. ಮಾತೆ ಸಿದ್ಧಿದಾತ್ರಿಯು ಸಕಲ ಸಿದ್ಧಿಗಳನ್ನು ಕರುಣಿಸಿ ಆಶೀರ್ವದಿಸಲಿ ಎಂದು ನವರಾತ್ರಿಯ ಒಂಭತ್ತನೇ ದಿನವಾದ ಇಂದು ಸಿದ್ಧಿದಾತ್ರಿಯನ್ನು ಪೂಜಿಸೋಣ. ನಿಮಗೂ, ನಿಮ್ಮ ಕುಟುಂಬಕ್ಕೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು. ನಾಡಿನಲ್ಲಿ ಸಕಲ ಸಮೃದ್ಧಿ ನೆಲೆಸಲು ಹರಸುವಂತೆ ಆಯುಧಪೂಜೆ ದಿನವಾದ ಇಂದು ತಾಯಿ ದುರ್ಗೆಗೆ ಪೂಜಿಸೋಣ ಎಂದು ತಿಳಿಸಿದ್ದಾರೆ.
ಸಚಿವ ಸಿ.ಟಿ.ರವಿ ಟ್ವೀಟ್ ಮಾಡಿ, ಭಾರತದ ಸಂಸ್ಕೃತಿಯ ಮೂಲ ಶಕ್ತಿಯ ಆರಾಧನೆ, ತಮಗೆಲ್ಲರಿಗೂ ಶಕ್ತಿಯ ಆರಾಧನೆಯ ನವರಾತ್ರಿಯ ಶುಭಾಶಯಗಳು. ಜಗನ್ಮಾತೆಯ ಕೃಪೆ ಸದಾ ನಮ್ಮೆಲ್ಲರ ಮೇಲಿರಲಿ, ತಾಯಿ ಚಾಮುಂಡೇಶ್ವರಿ ನಮ್ಮೆಲ್ಲರನ್ನು ಹರಸಿ ಹಾರೈಸಲಿ ಎಂದಿದ್ದಾರೆ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಶ್ರಮವನ್ನು ಗೌರವಿಸಿ ಆಯುಧ ಪೂಜೆಯನ್ನು ಮತ್ತು ಸತ್ಯ, ನ್ಯಾಯ ಮತ್ತು ಮನುಷ್ಯಪರ ಧರ್ಮಕ್ಕೆ ವಿಜಯವಾಗಲಿ ಎಂದು ಆಶಿಸಿ ವಿಜಯದಶಮಿಯನ್ನು ಆಚರಿಸೋಣ. ನಾಡ ಬಾಂಧವರೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ಎಂದು ಹೇಳಿದ್ದಾರೆ.
ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದು, ನಾಡದೇವತೆ ತಾಯಿ ಚಾಮುಂಡೇಶ್ವರಿಯ ಅನುಗ್ರಹದಿಂದ ನಾಡಿನ ಸಮಸ್ತ ಜನತೆಯ ಬದುಕು ಬಂಗಾರವಾಗಲಿ. ಎಲ್ಲಾ ಸಂಕಷ್ಟಗಳು ಕಳೆದು ಸಂತೋಷ, ಸಮೃದ್ಧಿ ಜೀವನ ನಮ್ಮೆಲ್ಲರದಾಗಲಿ. ಸೌರ್ಹಾದತೆಯ ಬದುಕು ನಾಡಿನ ಜನತೆಗೆ ಲಭಿಸಲಿ.. ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.