ನವದೆಹಲಿ, ಅ.25 (DaijiworldNews/PY): ಕೊರೊನಾ ವಿರುದ್ದದ ಯುದ್ದದಲ್ಲಿ ಗೆಲುವು ಖಚಿತ. ಇಂತಹ ಸಂಕಷ್ಟದ ಸಂದರ್ಭ ನಮಗೆಲ್ಲಾ ಸಂಯಮ ಮುಖ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರೇಡಿಯೋ ಕಾರ್ಯಕ್ರಮ ಮನ್-ಕೀ-ಬಾತ್ನಲ್ಲಿ ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಜನತೆಗೆ ದಸರಾ ಶುಭಾಶಯ ಕೋರಿದ್ದಾರೆ. ದೇಶದ ಜನತೆ ಸ್ವದೇಶಿ ಹಾಗೂ ಸ್ಥಳೀಯ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುವಂತೆ ಕರೆ ನೀಡಿದ್ದಾರೆ.
ಈ ಸಂದರ್ಭ, ನಮ್ಮ ದೇಶದ ಗಡಿ ಕಾಯುವ ಯೋಧರನ್ನು ನೆನೆಯಬೇಕು. ಭಾರತ ಮಾತೆಯ ಸುಪುತ್ರರಿಗಾಗಿ ನಾವು ದೀಪ ಬೆಳಗಬೇಕು. ಯೋಧರನ್ನು ನೆನೆಯುತ್ತಾ ನಾವು ಹಬ್ಬವನ್ನು ಆಚರಿಸೋಣ ಎಂದು ಹೇಳಿದ್ದಾರೆ.
ಹಬ್ಬದ ಆಚರಣೆಯ ಸಂದರ್ಭ, ಮಾಸ್ಕ್ ಧರಿಸುವುದನ್ನು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬೇಡಿ. ಪ್ರಸ್ತುತ ವರ್ಷದಂದು ಎಲ್ಲಾರು ಸೇರಿ ದುರ್ಗಾ ಪೂಜೆ ಮಾಡುವುದಕ್ಕೆ ಅವಕಾಶವಿಲ್ಲ. ಮುಂಬರುವ ದಿನಗಳಲ್ಲಿ ಸಾಕಷ್ಟು ಹಬ್ಬಗಳು ಬರುತ್ತವೆ. ಈ ಬಾರಿ ಕಟ್ಟುನಿಟ್ಟಾಗಿ ಹಾಗೂ ಮುಂಜಾಗ್ರತೆಯಿಂದ ಕೊರೊನಾ ವಿರುದ್ದ ಹೋರಾಡೋಣ. ಈ ಹೋರಾಟದಲ್ಲಿ ಗೆದ್ದು ಮುಂದೆ ಹಬ್ಬ ಆಚರಿಸೋಣ ಎಂದು ತಿಳಿಸಿದ್ದಾರೆ.
ನಮಗಾಗಿ ಹಾಗೂ ನಮ್ಮ ಕ್ಷೇಮಕ್ಕಾಗಿ ಶ್ರಮಿಸಿದ ವೈದ್ಯರು, ರಕ್ಷಣಾ ಪಡೆ ಸಿಬ್ಬಂದಿ ಸೇರಿದಂತೆ ಆರೋಗ್ಯ ಕಾರ್ಯಕರ್ತರು, ಪೊಲೀಸರು ಹಾಗೂ ಎಲ್ಲಾರನ್ನೂ ಈ ಹಬ್ಬದ ಸಂದರ್ಭ ನೆನೆಯೋಣ ಎಂದು ಹೇಳಿದ್ದಾರೆ.