ನಾಗ್ಪುರ, ಅ. 25 (DaijiworldNews/HR): ಚೀನಾ ದೇಶವು ಲಡಾಖ್ ಗಡಿಯಲ್ಲಿ ಭೂಮಿ ಆಕ್ರಮಿಸಲು ನಡೆಸಿದ ಎಲ್ಲಾ ಹುನ್ನಾರಗಳಿಗೆ ಭಾರತವು ಸಮರ್ಥವಾಗಿ ಪ್ರತ್ಯುತ್ತ ನೀಡಿದೆ ಎಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.
ಈ ಕುರಿತು ನಾಗ್ಪುರದಲ್ಲಿ ನಡೆದ ಆರ್ ಎಸ್ಎಸ್ ವಾರ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತನ್ನ ಶಕ್ತಿ, ಸಾಮರ್ಥ್ಯ, ವ್ಯಾಪ್ತಿಯಲ್ಲಿ ಭಾರತವು ಚೀನಾಕ್ಕಿಂತ ದೊಡ್ಡದಾಗಿರಬೇಕು. ಸಿಎಎ ಯಾವುದೇ ಧರ್ಮದ ವಿರುದ್ಧ ನಡೆಯುತ್ತಿರುವ ದಾಳಿಯಲ್ಲ. ನೆರೆಯ ದೇಶಗಳಲ್ಲಿ ಸಂಕಷ್ಟಕ್ಕೀಡಾಗಿರುವ ನಮ್ಮ ಸಹೋದರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಕಾನೂನು ಎಂದರು.
ಕೊರೊನಾ ಸೋಂಕಿನಿಂದಾಗಿ ಇಡೀ ಭಾರತ ದೇಶವೇ ನಲುಗಿದ್ದು ಕೇಂದ್ರ ಸರ್ಕಾರದ ಶಿಸ್ತುಬದ್ಧ ನೀತಿ ಮತ್ತು ಜನತೆಯ ಸಹಕಾರದಿಂದ ಅದರ ಅಬ್ಬರವನ್ನು ತಗ್ಗಿಸಲು ಸಾಧ್ಯವಾಗಿದೆ ಎಂದರು.
ಇನ್ನು ಕೊರೊನಾದಿಂದ ಅನೇಕರನ್ನು ರಕ್ಷಿಸಲು ಹಲವು ಕೊರೊನಾ ವಾರಿಯರ್ಸ್ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿದ್ದಾರೆ ಎಂದು ಹೇಳಿದರು.