ಕಲಬುರಗಿ, ಅ.25 (DaijiworldNews/PY): ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಅವರಿಗೆ ಧಮ್ ಇದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಕೂತು ಪರಿಹಾರ ತೆಗೆದುಕೊಂಡು ಬರಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಶ್ವತ್ಥ ನಾರಾಯಣ ಅವರಿಗೆ ಸವಾಲ್ ಹಾಕಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗಿಂತ ಹೆಚ್ಚು ಧಮ್ ಇದೆ ಎಂದು ಅಶ್ವಥ್ ನಾರಾಯಣ್ ಅವರು ಹೇಳುತ್ತಾರೆ. ಹಾಗಾದರೆ, ಅವರಿಗೆ ಧಮ್ ಇದ್ದರೆ ಪ್ರಧಾನಿ ಮೋದಿ ಅವರ ಮುಂದೆ ಕೂತು ಪರಿಹಾರ ತೆಗೆದುಕೊಂಡು ಎಂದು ಹೇಳಿದರು.
ಮುಂದಿನ ಮುಖ್ಯಮಂತ್ರಿ ಯಾರು ಆಗಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಜನರು ಅಭಿಮಾನದಿಂದ ಮುಖ್ಯಮಂತ್ರಿ ಆಗಲಿ ಎನ್ನುತ್ತಿದ್ದಾರೆ ಎಂದರು.
ಉಪಚುನಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಉಪಚುನಾವಣೆಯಲ್ಲಿನ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಪ್ರವಾಹ ಪರಿಸ್ಥಿತಿಯನ್ನು ಸರ್ಕಾರ ಉತ್ತಮವಾಗಿ ನಿರ್ವಹಿಸಿಲ್ಲ. ಇನ್ನು ಸವದಿ ಅವರು ಬಿಜೆಪಿಗೆ ಕಾಂಗ್ರೆಸ್ ಶಾಸಕರು ಬರುತ್ತಾರೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಆದರೆ, ರಾಜಕೀಯವಾಗಿ ಅವರು ಸುಖಾ ಸುಮ್ಮನೆ ಈ ಹೇಳಿಕೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಸಿಎಂ ಅವರು ವೈಮಾನಿಕ ಸಮೀಕ್ಷೆಯ ಸಂದರ್ಭ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಇದರಿಂದ ಯಾವುದೇ ರೀತಿಯಾದ ಪ್ರಯೋಜನವಾಗಿಲ್ಲ. ಅಲ್ಲದೇ ರಾಜ್ಯದಲ್ಲಿ 25 ಮಂದಿ ಬಿಜೆಪಿ ಸಂಸದರು ಇದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಎಂದರು.