ಬೆಂಗಳೂರು, ಅ.25 (DaijiworldNews/PY): 'ನಿಮ್ಮ ಆಡಳಿತವು ರೈತರಿಗೆ ಟಿಪ್ಪು ಆಡಳಿತದಂತಿತ್ತು. ರೈತರ ಪಾಲಿಗೆ ಮರಣಕೂಪದಂತಿದ್ದ ನಿಮ್ಮ ಅವಧಿಯಲ್ಲಿ 3000ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡದ್ದು ದುರ್ದೈವ' ಎಂದು ಬಿಜೆಪಿ ಟೀಕೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಮಾನ್ಯ ಸಿದ್ದರಾಮಯ್ಯ ಅವರೇ, ನಿಮ್ಮ ಆಡಳಿತವು ರೈತರಿಗೆ ಟಿಪ್ಪು ಆಡಳಿತದಂತಿತ್ತು. ರೈತರ ಪಾಲಿಗೆ ಮರಣಕೂಪದಂತಿದ್ದ ನಿಮ್ಮ ಅವಧಿಯಲ್ಲಿ 3000ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡದ್ದು ದುರ್ದೈವ. ಅನ್ನದಾತರು ಸಾವಿಗೆ ಶರಣಾಗುತ್ತಿದ್ದರೆ ನೀವು ಮಾತ್ರ ನೆಮ್ಮದಿಯಾಗಿ ನಿದ್ರಿಸುತ್ತಿದ್ದಿರಿ, ಅಲ್ಲವೇ?" ಎಂದು ಕೇಳಿದೆ.
"ನಿಮ್ಮ ದುರಾಡಳಿತದಲ್ಲಿ ಬೆಳಗಾವಿಯ ರೈತ ವಿಠಲ ಅರಭಾವಿ ಆತ್ಮಹತ್ಯೆಯ ಮಾಡಿಕೊಂಡಾಗ, "ರೈತನ ಆತ್ಮಹತ್ಯೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ, ಚೆನ್ನಾಗಿ ಕುಡಿದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ" ಎಂದು ಹೇಳಿದ್ದಿರಿ. ಓಬ್ಬ ಮುಖ್ಯಮಂತ್ರಿಯಾಗಿ ಆಡುವ ಮಾತೇ ಇದು ಸಿದ್ದರಾಮಯ್ಯ?" ಎಂದು ಪ್ರಶ್ನಿಸಿದೆ.
"2013-14 - 104, 2014-15 - 128, 2015-16 - 1483, 2016-17 - 1185, 2018-19 - 900ರಷ್ಟು ನಿಮ್ಮ ಅವಧಿಯಲ್ಲಿ 3 ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ, ಮುಖ್ಯಮಂತ್ರಿಯಾಗಿ ಅವರ ಕಣ್ಣೀರು ಓರೆಸುವ ಬದಲು ಟಿಪ್ಪು ಜಯಂತಿ ಆಚರಣೆಯಲ್ಲಿ ನಿರತರಾಗಿದ್ದಿರಿ, ಅಲ್ಲವೇ?" ಎಂದು ಕೇಳಿದೆ.
"ಅಧಿಕಾರದುದ್ದಕ್ಕೂ ರೈತರ ಆತ್ಮಹತ್ಯೆಗಳಿಗೆ ಕಾರಣರಾದ ತಾವು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದ ರೈತ ಪರ ಕಾಯ್ದೆಗಳಿಗೆ ನಾಟಕೀಯ ವಿರೋಧ ವ್ಯಕ್ತಪಡಿಸುತ್ತಿದ್ದೀರಿ. ನೀವು ರೈತ ಪರ ಆಡಳಿತ ನಡೆಸಿದ್ದರೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರಲಿಲ್ಲ, ಅಲ್ಲವೇ?" ಎಂದು ಪ್ರಶ್ನೆ ಮಾಡಿದೆ.
ಸಿಎಂ ಅವರು ವೈಮಾನಿಕ ಸಮೀಕ್ಷೆಯ ಸಂದರ್ಭ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಇದರಿಂದ ಯಾವುದೇ ರೀತಿಯಾದ ಪ್ರಯೋಜನವಾಗಿಲ್ಲ. ಅಲ್ಲದೇ ರಾಜ್ಯದಲ್ಲಿ 25 ಮಂದಿ ಬಿಜೆಪಿ ಸಂಸದರು ಇದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು.