ನವದೆಹಲಿ,ಅ. 25 (DaijiworldNews/HR): ಚೀನಾದೊಂದಿಗಿನ ಗಡಿ ಸಂಘರ್ಷ ಕೊನೆಗೊಳಿಸಲು ಭಾರತ ಬಯಸಿದೆ. ಆದರೆ ದೇಶದ ಒಂದು ಇಂಚು ಭೂಮಿಯನ್ನು ಕೂಡ ಯಾರೊಬ್ಬರು ಆಕ್ರಮಿಸಲು ಭಾರತೀಯ ಸೈನಿಕರು ಬಿಡುವುದಿಲ್ಲ ಎಂಬುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಭಾರತೀಯ ಸೇನೆಯ ಪ್ರಧಾನ ಕಚೇರಿಯಲ್ಲಿ ನಡೆದ ಶಸ್ತ್ರಾಸ್ತ್ರಗಳ ಪೂಜೆಯ ಬಳಿಕ ಮಾತನಾಡಿದ ಅವರು, ಚೀನಾದೊಂದಿಗೆ ನಡೆಯುತ್ತಿರುವ ಗಡಿ ಸಂಘರ್ಷ ಕೊನೆಗೊಳಿಸಲು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಭಾರತ ಬಯಸಿದೆ. ಆದರೆ ಕೆಲವೊಮ್ಮೆ ದುಷ್ಕೃತ್ಯಗಳು ನಡೆಯುತ್ತಿದ್ದು, ಅಂತಹದಕ್ಕೆ ನಮ್ಮ ಸೈನಿಕರು ಅವಕಾಶ ನೀಡುವುದಿಲ್ಲ ಎಂಬ ತುಂಬಾ ವಿಶ್ವಾಸ ನನಗಿದೆ ಎಂದರು.
ರಾಜನಾಥ್ ಸಿಂಗ್ ಎಲ್ಎಸಿಗೆ ಭೇಟಿ ಸಿಕ್ಕಿಂ ವಲಯದಲ್ಲಿನ ಎಲ್ಎಸಿ ಬಳಿ ಶಸ್ತ್ರ ಪೂಜೆಯನ್ನು ನೆರವೇರಿಸುವಾಗ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾನೆ ಮತ್ತು ಸೇನೆಯ ಹಲವಾರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಪೂಜೆ ನಂತರ, ಸಿಂಗ್ ಸುಕ್ನಾದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಸಿಕ್ಕಿಂನ ಹೊಸ ರಸ್ತೆಯನ್ನು ಉದ್ಘಾಟಿಸಿದರು.