ಬೆಳಗಾವಿ,ಅ. 25 (DaijiworldNews/HR): ದಿವಂಗತ ಸುರೇಶ ಅಂಗಡಿಯವರು ಬದುಕಿದ್ದರೆ ಎರಡು ಮೂರು ತಿಂಗಳಲ್ಲಿ ದೊಡ್ಡ ಸ್ಥಾನಕ್ಕೆ ಏರುತ್ತಿದ್ದರು. ಅವರಿಗೆ ಉತ್ತಮವಾದ ಭವಿಷ್ಯವಿತ್ತು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಈ ಕುರಿತು ಇಂದು ಗೋಕಾಕದಲ್ಲಿ ನಡೆದ ಗ್ರಾಮೀಣ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಸುರೇಶ ಅಂಗಡಿ ಅವರಿಗೆ ಬಹಳ ಬುದ್ಧಿಶಕ್ತಿ ಇತ್ತು. ಒಳ್ಳೆಯ ನಾಯಕರಾಗಿದ್ದರು. ಅವರ ಅಗಲಿಕೆಯಿಂದ ಬಹಳ ನೋವಾಗಿದೆ ಎಂದರು.
ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬರಲಿರುವ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು. ಅಭ್ಯರ್ಥಿ ಯಾರಾಗಬೇಕು ಎನ್ನುವುದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ. ಅದನ್ನು ನಾವೆಲ್ಲರೂ ಗೌರವಿಸಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಪಕ್ಷ ರಾಷ್ಟ್ರದಾದ್ಯಂತ ವಿಸ್ತಾರವಾಗಿ ಬೆಳೆಯುತ್ತಿದ್ದು, ಅತ್ಯಂತ ದೊಡ್ಡ ಕಾರ್ಯಕರ್ತರ ಪಡೆ ಇದೆ. ಸಾಮಾನ್ಯ ಕಾರ್ಯಕರ್ತರಿಗೂ ಇಲ್ಲಿ ಬಹಳ ಮಾನ್ಯತೆ ಇದೆ ಎಂದು ಹೇಳಿದ್ದಾರೆ.