ನವದೆಹಲಿ, ಅ.26 (DaijiworldNews/PY): ದೇಶದ ಪ್ರತಿಯೋರ್ವ ವ್ಯಕ್ತಿಗೆ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ದೇಶದಲ್ಲಿ ಪ್ರತಿಯೊಬ್ಬರಿಗೆ ಲಸಿಕೆ ನೀಡಲು ಅಂದಾಜು 500 ರೂ.ಗಳನ್ನು ಖರ್ಚು ಮಾಡಲಾಗುವುದು ಎಂದು ಕೇಂದ್ರ ಸಚಿವ ಪ್ರತಾಪ್ ಸಾರಂಗಿ ಹೇಳಿದ್ದಾರೆ.
ಬಾಲಂಗೋರ್ನಲ್ಲಿ ನ.3ರ ವಿಧಾನಸಭಾ ಉಪ ಚುನಾವಣೆಯ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಜನರಿಗೆ ಉಚಿತ ಕೊರೊನಾ ಲಸಿಕೆ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ ಎಂದಿದ್ದಾರೆ.
ವಿತ್ತ ಸಚಿವರ ನಿರ್ಮಲಾ ಸೀತಾರಾಮನ್ ಅವರು ಕಳೆದ ವಾರ ಬಿಹಾರದ ಜನತೆಗೆ ಉಚಿತವಾಗಿ ಕೊರೊನಾ ಲಸಿಕೆ ನೀಡುವುದಾಗಿ ತಿಳಿಸಿದ್ದರು. ಸೀತಾರಾಮನ್ ಅವರ ಹೇಳಿಕೆಗೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಕೊರೊನಾ ಲಸಿಕೆ ವಿಚಾರವನ್ನು ಎನ್ಡಿಎ ಸರ್ಕಾರ ರಾಜಕೀಯ ಲಾಭಕ್ಕಾಗಿ ಉಪಯೋಗ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಅಸ್ಸಾಂ ಸೇರಿದಂತೆ, ಮಧ್ಯಪ್ರದೇಶ ಪಾಂಡಿಚೇರಿ ಹಾಗೂ ತಮಿಳುನಾಡು ಸರ್ಕಾರಗಳು ತಮ್ಮ ರಾಜ್ಯದ ಜನತೆಗೆ ಉಚಿತ ಕೊರೊನಾ ಲಸಿಕೆ ನೀಡುವುದಾಗಿ ತಿಳಿಸಿದೆ. ಆದರೆ, ದೇಶಾದ್ಯಂತ ಎಲ್ಲಾ ನಾಗರಿಕರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡುವಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಒತ್ತಾಯಿಸಿದ್ದಾರೆ.